Oplus_0

ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6 ರಿಂದ ಫೆಬ್ರವರಿ 12 ರವರೆಗೆ ಕರದಾಳ ಶಕ್ತಿ ಪೀಠದಿಂದ ಬೆಂಗಳೂರು ಶಕ್ತಿ ಸೌಧದವರೆಗೆ ಐತಿಹಾಸಿಕ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 2026 ಜನವರಿ 6 ರಿಂದ ಫೆಬ್ರವರಿ 12 ರವರೆಗೆ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ದಿಂದ ಬೆಂಗಳೂರು ಶಕ್ತಿ ಸೌಧದವರೆಗೆ ಐತಿಹಾಸಿಕ ಪಾದಯಾತ್ರೆ (700 ಕಿ.ಮಿ 41 ದಿನಗಳವರೆಗೆ) ಹಮ್ಮಿಕೊಳ್ಳಲಾಗಿದೆ ಎಂದು ಪೀಠಾಧಿಪತಿ ಡಾ. ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಐತಿಹಾಸಿಕ ಪಾದಯಾತ್ರೆಗೆ ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ತನು ಮನ ಧನದೊಂದಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಪಾದಯಾತ್ರೆ ಯಾರ ವಿರುದ್ಧವೂ ಅಲ್ಲ ಯಾರ ಪರವೂ ಇಲ್ಲ, ಇದು ಸಮುದಾಯದ ಮಕ್ಕಳ ಮೊಮ್ಮಕ್ಕಳ ಭವಿಷ್ಯಕ್ಕಾಗಿ, ಸಮಾಜದ ನ್ಯಾಯಕ್ಕಾಗಿ ಈ ಪಾದಯಾತ್ರೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡುವರೇ ವರ್ಷವಾಯಿತು, ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಂಡ ಸಿದ್ದರಾಮಯ್ಯ ಅವರು ಕೇವಲ ಒಂದೇರಡು ಜಾತಿಯವರಿಗೆ ಸೌಲಭ್ಯ ಒದಗಿಸಿ ಈಡಿಗ ಸಮಾಜವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಪಾದಯಾತ್ರೆ ಮುಗಿಯುವುದರೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಸ್ಪಂದಿಸದಿದ್ದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಲಾಗುವುದು ಎಂದು ಹೇಳಿದರು.

ಪಾದಯಾತ್ರೆಯ ಪ್ರಮುಖ ಬೇಡಿಕೆಗಳು :

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ 500 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು, ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗರಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡುವುದು,  ಸಮಾಜವನ್ನು ಈಗಿರುವ 2ಎ ಯಿಂದ ಎಸ್ಟಿ ಮೀಸಲಾತಿಗೆ ಸೇರಿಸುವುದಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರುಗಡೆ ಸ್ಥಾಪಿಸಬೇಕು, ರಾಜ್ಯದ ಈಡಿಗ ಸಮಾಜದ ಹಾಗೂ ಹಿಂದುಳಿದ ವರ್ಗದ ಭಕ್ತಿ-ಶ್ರದ್ಧಾ ಕೇಂದ್ರವಾದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕ್ಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಂಡು ದೇವಸ್ಥಾನಕ್ಕೆ ಸೂಕ್ತ ಭದ್ರತೆ ನೀಡಿ ಹಾಗೂ ಕ್ಷೇತ್ರಕ್ಕೆ ಅಗತ್ಯ ಭೂಮಿ ಮಂಜೂರು ಮಾಡಬೇಕು, ಮದ್ಯ ಮಾರಾಟದಲ್ಲಿ ಸಮಾಜದ ಈಡಿಗ ಸೇರಿದಂತೆ 26 ಪಂಗಡಗಳಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು, ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗಾಗಿ ಕೋಟಿ ಚೆನ್ನಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಬಜೆಟ್ನಲ್ಲಿ ಕನಿಷ್ಠ 100 ಕೋಟಿ ರೂಪಾಯಿ ಮಂಜೂರು ಮಾಡಬೇಕು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸುವುದು ಮತ್ತು ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡುವುದು, ಅನುಭವ ಮಂಟಪದಲ್ಲಿ ಈಡಿಗ ಜನಾಂಗದ ಶರಣರಾದ ಹೆಂಡದ ಮಾರಯ್ಯನವರ ಜಯಂತಿ ಆಚರಣೆಯನ್ನು ಸರ್ಕಾರ ಘೋಷಣೆ ಮಾಡಬೇಕು, ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರವಾಗಿ ಮನೆ ಹಾಗೂ ಜಮೀನು ನೀಡುವುದು, ರಾಜ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಸಂದರ್ಭದಲ್ಲಿ ಸಮುದಾಯದ ಸಾಧಕರಿಗೆ ” ಬ್ರಹ್ಮಶ್ರೀ ನಾರಾಯಣ ಗುರು “ರಾಜ್ಯ ಮಟ್ಟದ ಪ್ರಶಸ್ತಿಯನ್ನು ಐದು ಲಕ್ಷ ನಗದು ಪುರಸ್ಕಾರದೊಂದಿಗೆ ನೀಡುವುದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸಮಾಜ ಬಾಂಧವರು ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಮನೆ ಕಟ್ಟಿಕೊಂಡವರಿಗೆ ಜಮೀನು ಸಕ್ರಮಗೊಳಿಸಬೇಕು, ಶಿವಮೊಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರವನ್ನು ಮರಳಿ ವಿಧಾನಸಭೆ ಕ್ಷೇತ್ರವಾಗಿ ಮಾಡುವುದಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು, ಅಶ್ರಯ ಮತ್ತು ವಸತಿ ಯೋಜನೆಯಲ್ಲಿ ಸಮಾಜಕ್ಕೆ ಪ್ರತ್ಯೇಕವಾಗಿ 25 ಸಾವಿರ ಮನೆ ಮಂಜೂರು ಮಾಡಬೇಕು, ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿಯೂ ಬ್ರಹ್ಮಶ್ರೀ ನಾರಾಯಾಣ ಗುರುಭವನ ನಿರ್ಮಿಸುವುದಕ್ಕೆ ಭೂಮಿ ಮಂಜೂರು ಮಾಡಬೇಕು, ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಘೋಷಣೆ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು, ಸಮುದಾಯದ ಟ್ರಸ್ಟ್ ವೊಂದಕ್ಕೆ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡುವುದು, ಶಿವಮೊಗ್ಗ ಮಂಗಳೂರು, ಕಾರವಾರ, ಉಡುಪಿ ಪ್ರತಿ ಜಿಲ್ಲೆಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.

ಸುದ್ದಿಗೋಷ್ಠಿಯಲ್ಲಿ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ, ಮುಖಂಡರಾದ ಶ್ರೀಮಂತ ಗುತ್ತೇದಾರ, ಕಾಶಿನಾಥ ಗುತ್ತೇದಾರ, ಸುರೇಶ್ ಗುತ್ತೇದಾರ, ಉಮೇಶ್ ಗುತ್ತೇದಾರ, ಬಸವರಾಜ ಗುತ್ತೇದಾರ, ರವಿ ಸೂಲಹಳ್ಳಿ, ನರಸಯ್ಯ ಗುತ್ತೇದಾರ ಕರದಾಳ, ನರಸಯ್ಯ ಗುತ್ತೇದಾರ ಅಳ್ಳೋಳ್ಳಿ, ಪುನೀತ್ ಗುತ್ತೇದಾರ ಸೇರಿದಂತೆ ಇತರರು.

Spread the love

Leave a Reply

Your email address will not be published. Required fields are marked *

You missed

error: Content is protected !!