ಕುಪನೂರ ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ ಹಬ್ಬದ ಸಡಗರ | ಇಮಾಮ್ ಸಾಹೇಬ್ ಸವಾರಿ ವೈಭವ ಕಣ್ತುಂಬಿಕೊಂಡ ಭಕ್ತಸಾಗರ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ತಾಲೂಕಿನ ಕುಪನೂರ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಭಕ್ತಿಭಾವ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಡೆದ ಇಮಾಮ್ ಸಾಹೇಬ್ ಸವಾರಿಯು ಗ್ರಾಮದಲ್ಲಿ ವೈಭವದಿಂದ ಸಂಚರಿಸಿ ಸಾವಿರಾರು ಭಕ್ತರ ಗಮನ ಸೆಳೆಯಿತು.
ತಾಲೂಕಿನ ಕುಪನೂರ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಮೊಹರಂ ಹಬ್ಬವು ಸರ್ವ ಧರ್ಮದವರ ಸಮ್ಮುಖದಲ್ಲಿ ಅತ್ಯಂತ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಗಳಿಂದ ಜರುಗಿತು. ಗ್ರಾಮದ ಹೊಸ ದರ್ಗಾದ ಖಾಸಿಂ ದುಲೆ ಮಸೀದಿಯ ಇಮಾಮ್ ಸಾಹೇಬ್ ಅವರ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು.
ಇಲ್ಲಿನ ಮೊಹರಂ ಹಬ್ಬವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಅಪೂರ್ವ ಭಾವೈಕ್ಯತೆ ಹಾಗೂ ಸಹೋದರತೆಗೆ ಸಾಕ್ಷಿಯಾಗಿದೆ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಸಾಂಸ್ಕೃತಿಕ ಆಚರಣೆಯಲ್ಲಿ ಇಂದಿಗೂ ಎಲ್ಲ ಸಮುದಾಯದ ಬಾಂಧವರು ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಗ್ರಾಮದ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಶ್ರೀಮಂತ-ಬಡವ, ಮೇಲು-ಕೀಳು ಎಂಬ ಯಾವುದೇ ಭೇದಭಾವವಿಲ್ಲದೆ ಸರ್ವ ಧರ್ಮೀಯರು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಇಲ್ಲಿನ ವಿಶೇಷತೆಯಾಗಿದೆ.
ಹಬ್ಬದ ಅಂಗವಾಗಿ ಮುಸ್ಲಿಂ ಹಾಗೂ ಹಿಂದೂ ಸಮುದಾಯದವರು ಪರಸ್ಪರ ಸಡಗರದಿಂದ ತಮ್ಮ ಮನೆಗಳಿಗೆ ಸುಣ್ಣ-ಬಣ್ಣ ಬಳಿದು, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿನ ಆಚರಣೆಯ ವೈಖರಿ ಅತ್ಯಂತ ಅಪರೂಪದ್ದಾಗಿದ್ದು, ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮುಳುಗಿರುತ್ತದೆ.
ರೈತರು ಹಾಗೂ ಭಕ್ತಾದಿಗಳು ಇಮಾಮ್ ಸಾಹೇಬ್ ಸನ್ನಿಧಿಯಲ್ಲಿ ತಮಗಿರುವ ಕಷ್ಟ-ಕಾರ್ಪಣ್ಯಗಳನ್ನು ನೀಗಿಸುವಂತೆ ದೇವರ ಮೊರೆ ಹೋಗುತ್ತಾರೆ. ಸವಾರಿಯ ಸಂದರ್ಭದಲ್ಲಿ ಭಕ್ತರು ವಿವಿಧ ರೂಪದಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪ್ರಮುಖವಾಗಿ ಉತ್ತಮ ಮಳೆ-ಬೆಳೆಯಾಗಲಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಂಟಕಗಳು ದೂರವಾಗಲಿ, ಸಂತಾನ ಪ್ರಾಪ್ತಿ ಹಾಗೂ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಪರಿಹಾರವಾಗಲಿ ಎಂದು ನೆರೆದಿದ್ದ ನೂರಾರು ಭಕ್ತರು ಜಯಘೋಷಗಳೊಂದಿಗೆ ಹರಕೆಗಳನ್ನು ತೀರಿಸಿದರು.
ಈ ಸಂದರ್ಭದಲ್ಲಿ ಅಹ್ಮದ ಪಟೇಲ, ಜಗದೇವಯ್ಯ ಸ್ವಾಮಿ, ಸುರೇಶ ವೈದರಾಜ, ಶರಣು ಪಾಟೀಲ, ಅಬ್ಬಾಸ ಅಲಿ, ಮುಜ್ಜಮೀಲ್ ಆಲಾಮಿ, ಜಾಕೀರ ಹುಸ್ಸೇನ್, ಬಾಬು ಮಿಯ್ಯ ಚತ್ರಸಾಲ, ಮಲ್ಲಿಕಾರ್ಜುನ, ಮಹ್ಮದ ಮೇರಾಜ ತಾಜಲಾಪೂರ್, ಶಕೀಲ ಚತ್ರಸಾಲ, ದೇವಾನಂದ ಟೆಂಗಳಿ, ಘುಡುಸಾಬ್, ಯಾಸೀನ್ ನಾಗೂರ ಇತರರು ಇದ್ದರು.
