Oplus_0

ಮಹಾದೇವಪ್ಪ ಕಡೇಚೂರ್ ಕೃತಿ ಅಯ್ಯನ ಕಥೆಗಳು ಲೋಕಾರ್ಪಣೆ | ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡಿದ ಮಾದರಿ ವ್ಯಕ್ತಿ ಕಡೇಚೂರ್: ಹೊಸಮನಿ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಅವರು ಬದುಕಿನುದ್ದಕ್ಕೂ ಆದರ್ಶದ ಬಾಳ್ವೆ ಮಾಡಿ ಅದರ ಪ್ರೇರಣೆಯಿಂದಲೇ ಅವರ ಭಾವನೆಗಳ ಸ್ಫುರಣೆಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವ ಕಥಾ ಹಂದರವನ್ನು ಅದು ಒಳಗೊಂಡಿದೆ ಎಂದು ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶ್ ಎಸ್. ಹೊಸಮನಿ ಹೇಳಿದರು.

ನಗರದ ಬೃಂದಾವನ ಗ್ರ್ಯಾಂಡ್ ಹೋಟೆಲ್ ಬಲದೇವ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾದೇವಪ್ಪ ಕಡೇಚೂರ್ ಅವರ ಪ್ರಥಮ ಪುಣ್ಯ ಸ್ಮರಣೆಯ ಅಂಗವಾಗಿ ಅವರ “ಅಯ್ಯನ ಕಥೆಗಳು” ಸಣ್ಣ ಕಥೆಗಳ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಇಂತಹ ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪವಾಗಿದ್ದು ಕ್ರೀಡೆ, ಸ್ನೇಹ, ಓದುವ ಹವ್ಯಾಸ, ಸಾಹಸ ಮಹಾಪುರುಷರ ಕಥೆಗಳು ಪ್ರಾಣಿ ಪ್ರೀತಿ ಮುಂತಾದ ಮಕ್ಕಳ ಕಥೆಗಳು ಇನ್ನಷ್ಟು ಪ್ರಭಾವಶಾಲಿಯಾಗಿ ಮಕ್ಕಳು ಬೆಳೆಯಲು ಪ್ರೇರಣೆ ನೀಡುವ ಕೃತಿಯಾಗಿ ಮೂಡಿ ಬಂದಿದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ. ಜಯದೇವಿ ಗಾಯಕವಾಡ್ ಅಧ್ಯಕ್ಷತೆ ವಹಿಸಿ, ಮೌಲ್ಯ ಕುಸಿಯುತ್ತಿರುವಾಗ ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ಕಥೆಗಳ ಮೂಲಕ ನೀತಿಯನ್ನು ಬೋಧನೆ ಮಾಡಲು ಪ್ರಯತ್ನಿಸಿದ ಕಡೇಚೂರ್ ಅವರ ಇಡೀ ಬದುಕು ಆದರ್ಶಪ್ರಾಯವಾದುದು. ಮಕ್ಕಳು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅನ್ಯಾಯ ಶೋಷಣೆಗೆ ಎಚ್ಚರ ನೀಡುವ ಕೃತಿಯ ಕಥೆಗಳು ನಿಜಕ್ಕೂ ನಮಗೆ ದಾರಿ ದೀಪವಾಗಲಿದೆ ಎಂದರು.

ಲೇಖಕನ ಜವಾಬ್ದಾರಿ ಕೃತಿಯಲ್ಲಿ ಅನಾವರಣ:

ಸಮಾಜದ ನೈತಿಕ ಶುದ್ಧೀಕರಣಕ್ಕೆ ಕಥಾಹಂದರವನ್ನ ಹೆಣೆದು ಲೇಖಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಕಥಾ ಸಂಕಲನ ಇದಾಗಿದೆ. ಕಥೆಗಳ ಪಾತ್ರ ಶೈಲಿ ಭಾಷೆ ಅತ್ಯಂತ ಸರಳವಾಗಿ ಮಣ್ಣಿನ ಸೊಗಡನ್ನು ಬಿಂಬಿಸುತ್ತಿದೆ. ಹೈಸ್ಕೂಲಿನಿಂದ ಕಾಲೇಜಿನವರೆಗೆ ಓದುವ ವಿದ್ಯಾರ್ಥಿಗಳಿಗೆ ನೀತಿ ಬೋಧೆಯನ್ನು ನೀಡುವ ಉತ್ತಮ ಕೃತಿ ಎಂದು ಪುಸ್ತಕದ ಬಗ್ಗೆ ವಿಮರ್ಶೆ ಮಾಡಿದ ವೀರಶೆಟ್ಟಿ ಬಿ ಗಾರಂಪಳ್ಳಿ ಹೇಳಿದರು.

ಕಡೇಚೂರ್ ವಾರ್ಷಿಕ ಪ್ರಶಸ್ತಿ ಘೋಷಿಸಿ:

ಮಂತ್ರ – ತಂತ್ರ – ಯಂತ್ರ ಯುಗವನ್ನು ದಾಟಿದ ಇಂದಿನ ಸಮಾಜ ಕುತಂತ್ರ ಯುಗದಲ್ಲಿ ಬದುಕುತ್ತಿದ್ದು ಮೌಲ್ಯಗಳು ಕಣ್ಮರೆಯಾಗುತ್ತಿರುವ ಕಾಲ ಘಟ್ಟದಲ್ಲಿ ಹಿರಿಯರು ಜವಾಬ್ದಾರಿಯುತ ಬದುಕನ್ನು ಮಾಡಿ ಎಚ್ಚರಿಕೆಯನ್ನು ನೀಡಿದ್ದು ಅದು ಈ ಕಥೆಗಳಲ್ಲಿ ಕೂಡಾ ಅನಾವರಣಗೊಂಡಿದೆ. ಬದುಕಿನ ಚಿಂತನೆ ಮತ್ತು ಮೌಲ್ಯಗಳು ಕಥೆಯ ಅಂತಃಸತ್ವವಾಗಿದ್ದು ವ್ಯಕ್ತಿತ್ವ ನಿರ್ಮಾಣಕ್ಕೆ ನೀತಿ ಬೋಧಕ ಕಥೆಗಳಾಗಿವೆ. ಕಡೇಚೂರ್ ಹೋರಾಟ ದ ಮೂಲಕ ಮಾನವೀಯ ಮೌಲ್ಯದ ಅರ್ಥವಂತಿಕೆಯ ಜೀವನ ಸಾಗಿಸಿದವರು. ಅವರ ಹೆಸರಿನಲ್ಲಿ ಪ್ರತಿಷ್ಠಾನವು ಪ್ರತಿ ವರ್ಷ ಒಬ್ಬ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಲಿ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಸಲಹೆ ನೀಡಿದರು.

ಪುಸ್ತಕ ಬಿಡುಗಡೆ ಕ್ರಮ ಬದಲಾಗಲಿ:

ಪುಸ್ತಕ ಬಿಡುಗಡೆ ಕಾರ್ಯಕ್ರಮವು ಸಾಂಪ್ರದಾಯಿಕ ಶೈಲಿಯಿಂದ ವಿದೇಶದಲ್ಲಿರುವಂತೆ ಭಿನ್ನವಾಗಿ ಆಗಬೇಕಾಗಿದೆ. ವಿದೇಶದಲ್ಲಿ ಸಾಂಕೇತಿಕವಾಗಿ ಪುಸ್ತಕದ ಲೇಖಕ ಕೃತಿಯನ್ನು ಬರೆದ ಬಗೆಯನ್ನು ತಿಳಿಸಿದರೆ ಸಭಿಕರು ಪ್ರಶ್ನೆಗಳ ಮೂಲಕ ಕೃತಿಯ ಒಳನೋಟವನ್ನು ತಿಳಿಸುತ್ತಾರೆ. ಅಂತಹ ಪದ್ಧತಿಯಲ್ಲಿ ಪುಸ್ತಕ ಬಿಡುಗಡೆಯಾದರೆ ಲೇಖಕ, ಮತ್ತು ಓದುಗನ ನಡುವಿನ ಸಂಬಂಧ ವೃದ್ಧಿಗೊಳ್ಳುತ್ತದೆ ಕೃತಿ ಪೂರ್ಣ ರೂಪದಲ್ಲಿ ಅನಾವರಣಗೊಳ್ಳುತ್ತದೆ ಎಂದು ಹಿರಿಯ ವೈದ್ಯರಾದ ಡಾ. ಪಿ. ಎಸ್. ಶಂಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಪಿ.ಎಸ್ ಶಂಕರ್, ಸ್ವಾಮಿರಾವ್ ಕುಲಕರ್ಣಿ ಮಾತನಾಡಿದರು. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕರಾದ ವೀರಶೆಟ್ಟಿ ಬಿ ಗಾರಂಪಳ್ಳಿ ಪುಸ್ತಕ ಪರಿಚಯ ಮಾಡಿದರು.

ಧರ್ಮದರ್ಶಿ ವೆಂಕಟೇಶ ಎಂ ಕಡೇಚೂರ್, ಚಂದ್ರಕಾಂತ ಗುತ್ತೇದಾರ, ಡಾ. ಹನುಮಂತರಾವ್ ದೊಡ್ಡಮನಿ, ಬೋಡೆ ರಿಯಾಝ್ ಅಹಮ್ಮದ್, ಮಹಾದೇವಯ್ಯ ಕರದಳ್ಳಿ, ಸಂಧ್ಯಾ ಹೊನಗುಂಟಿಕರ್, ನಾರಾಯಣ ಕುಲಕರ್ಣಿ, ಚಿತ್ರಶೇಖರ ಕಂಠಿ, ಸುಬ್ರಾವ್ ಕುಲಕರ್ಣಿ, ಪ್ರಭಾಕರ ಜೋಶಿ ಸೇಡಂ, ಜಮುನಾ ಗುತ್ತೇದಾರ, ಭೀಮಣ್ಣ ಬೋನಾಳ, ಡಾ. ಸುರೇಶ್ ಹೇರೂರು, ಲಕ್ಷ್ಮಣರಾವ್ ಪೊಲೀಸ್ ಪಾಟೀಲ್, ವೀರಭದ್ರ ಸಿಂಪಿ, ಬಿ.ಆರ್ ಅಣ್ಣಾಸಾಗರ್, ಡಾ. ಎಸ್ ಎಸ್ ಗುಬ್ಬಿ, ಬಸವರಾಜ ಕೊನೆಕ್ , ಡಾ.ಆನಂದ ಸಿದ್ದಾಮನಿ, ವಿನೋದ್ ಜನೆವರಿ, ಕುಪೇಂದ್ರ ಶಾಸ್ತ್ರಿ, ಕೃಷ್ಣಮೂರ್ತಿ ಹಳ್ಳಿಖೇಡ್ ಅನಿಲ್ ಕುಮಾರ್ ಎಚ್ ಎನ್, ಶಾಂತಾ ಭೀಮಸೇನ್ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಸದಾನಂದ ಪೆರ್ಲ ಸ್ವಾಗತ ಕೋರಿದರು, ಕಿರಣ್ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದರು, ಡಾ. ಗವಿಸಿದ್ದಪ್ಪ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!