Oplus_0

ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ಉ.ಕ. ಜಿಲ್ಲಾ ಘಟಕದ ಉದ್ಘಾಟನೆ | ರಂಗಭೂಮಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಮಲಕೂಡ

ನಾಗಾವಿ ಎಕ್ಸಪ್ರೆಸ್ 

ಅಂಕೋಲಾ: ಸಂಘಗಳು ಸಂಘಟನೆಗಾಗಿ ಮಾತ್ರ ಸೀಮಿತವಾಗದೆ ನಾಟಕ ಲೇಖಕರ ಗೌರವದ ಜೊತೆಗೆ ರಂಗಭೂಮಿ ಅಭಿವೃದ್ಧಿಗೆ ಸಹಕಾರಿಯಾಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗಯ್ಯ ಸೋಮಯ್ಯ ಮಲಕೂಡ ಹೇಳಿದರು.

ಅಮದಳ್ಳಿಯ ಶ್ರೀ ಬಾಲವೀರ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಖಿಲ‌ ಕರ್ನಾಟಕ ನಾಟಕ ಲೇಖಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಲೇಖಕರ ಸಂಘಟನೆಗೆ ಮೂಲ ಕಾರಣರಾದ ಅವರ್ಸಾದ ಲೇಖಕ ಸಂತೋಷ ನಾಯಕ ಅವರ ದೂರದೃಷ್ಟಿಯ ನಿರ್ಧಾರ ರಾಜ್ಯ ಮಟ್ಟದಲ್ಲಿ ನಾಟಕ ಲೇಖಕರು ಸಂಘಟಿತರಾಗಲು ನಾಂದಿ ಹಾಡಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಕೃಷ್ಣಾನಂದ ನಾಯ್ಕ ಕಾರವಾರ, ಜಿಲ್ಲಾ ಅಧ್ಯಕ್ಷರಾಗಿ ಮೋಹನ ನಾಯ್ಕ ಹೊನ್ನಾವರ, ಕಾರ್ಯಾಧ್ಯಕ್ಷರಾಗಿ ಸಮೀದ ಬಾಂದೇಕರ ಅರ್ಗಾ, ಸಂಘಟನಾ ಕಾರ್ಯದರ್ಶಿಯಾಗಿ ಗಣಪತಿ ಮಹಾಲೆ ತೋಡೂರ, ಸಂಚಾಲಕರಾಗಿ ಸಮರ್ಥ ನಾಯ್ಕ ದೇವಳಮಕ್ಕಿ ಹಾಗೂ ನಿರ್ದೇಶಕರಾಗಿ ಶ್ರೀಧರ್ ಗೌಡ, ಅಗಸೂರ ಇವರು ರಾಜ್ಯಾಧ್ಯಕ್ಷರಿಂದ ಪದಗ್ರಹಣ ಸ್ವೀಕರಿಸಿದರು.

ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ಸಂಸ್ಥಾಪಕರಾದ ಸಂತೋಷ ನಾಯಕ ಅವರ್ಸಾ ಇವರು ಪ್ರಾಸ್ತಾವಿಕ ಮಾತನಾಡಿ, ರಂಗಭೂಮಿಯು ರಾಜ್ಯದ ಪ್ರಮುಖ ಕಲೆಯಾಗಿದ್ದರೂ ಕೂಡ ನಾಟಕ ಲೇಖಕರ ಸಂಘ ಇರಲಿಲ್ಲ. ಹೀಗಾಗಿ ನಾಟಕ ಲೇಖಕರ ಸಂಘ ರಚಿಸುವ ನನ್ನ ಆಲೋಚನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ‌ ನಾಟಕ ಲೇಖಕರ ಸಂಘ ಅಸ್ಥಿತ್ವಕ್ಕೆ ಬಂದಿದೆ. ಅದರ ಅಂಗವಾಗಿ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದರು.

ಜಿಲ್ಲಾ ಸಂಘದ ಗೌರವಾಧ್ಯಕ್ಷ ಲೇಖಕ ಕೃಷ್ಣಾನಂದ‌ ನಾಯ್ಕ‌ ಮಾತನಾಡಿ, ನಮ್ಮ ಜಿಲ್ಲೆಯ ಅನೇಕ ಹಿರಿಯ ಲೇಖಕರು ಹಾಗೂ ಇತ್ತೀಚಿನ ಉದಯೋನ್ಮುಖ ಲೇಖಕರು ಬರೆದ ನಾಟಕಗಳು ರಾಜ್ಯಾದ್ಯಂತ ಪ್ರಚಲಿತದಲ್ಲಿವೆ. ಆದರೆ ವಿಷಾದವೆಂದರೆ ನಾಟಕದ ಲೇಖಕರಿಗೆ ಸಿಗಬೇಕಾದ ಗೌರವ ಮತ್ತು ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ನಾಟಕದ ಮೂಲ ಲೇಖಕರ ಹೆಸರನ್ನು ಮರೆಮಾಚಿ ಯಾರದ್ದೋ ಹೆಸರನ್ನು ಹಾಕುವದು, ಮೂಲ ಕಥೆಯನ್ನೇ ತಿರುಚುವದು, ಕೃತಿಯಲ್ಲಿನ ಹಾಸ್ಯ ಸನ್ನಿವೇಶಗಳನ್ನು ಬದಲಾಯಿಸಿ ಅಸಹ್ಯ ಸನ್ನಿವೇಷಗಳನ್ನು ಸೃಷ್ಠಿಸುವದು ಹೀಗೆಲ್ಲ ಮಾಡಿ ಲೇಖಕರ ಘನತೆಗೆ ಧಕ್ಕೆಯಾಗುತ್ತಿದೆ. ನಾಟಕ‌ದ ಲೇಖಕರಿಗೆ ಸಿಗಬೇಕಾದ ನ್ಯಾಯಯುತ ಗೌರವ ಸಿಗದೇ ಇದ್ದಾಗ ಲೇಖಕರ ಸಂಘ ಹುಟ್ಟಿಕೊಳ್ಳುವದು ಅನಿವಾರ್ಯವಾಗಿದೆ. ಈಗ ಜಿಲ್ಲೆಯ ಲೇಖಕರು ಸಂಘಟಿತರಾಗಿ ಜಿಲ್ಲಾ ಘಟಕದ ಮೂಲಕ ರಂಗಭೂಮಿಯ ಮೂಲ ಸಂಸ್ಕ್ರತಿಯ ರಕ್ಷಣೆಗೆ ಕಟಿಬದ್ದರಾಗೋಣ ಎಂದರು.

ಜಿಲ್ಲಾಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ನಾಟಕದ ಲೇಖಕರ ಸಂಖ್ಯೆ ಗಣನೀಯವಾಗಿ ಬೆಳೆದಿದೆ ಹೀಗಾಗಿ ಸಂತೋಷ ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ನಾಟಕ ಲೇಖಕರ ಸಂಘ ರಚನೆಯಾಗುತ್ತಿರುವದು ಸ್ವಾಗತಾರ್ಹ ಎಂದರು. ಅದ್ಯಕ್ಷತೆ ವಹಿಸಿದ್ದ ಅಮದಳ್ಳಿ ಗ್ರಾ. ಪಂ. ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ನಾಟಕ ಲೇಖಕರ ಸಂಘಕ್ಕೆ ಚಾಲನೆ ನೀಡಿರುವದು ಸ್ವಾಗತಾರ್ಹ, ಸ್ಪಷ್ಠವಾದ ಉದ್ದೇಶವನ್ನು ಹೊಂದಿ ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ಜ್ಞಾನೇಶ್ವರ ನಾಯ್ಕ, ಉಪಾಧ್ಯಕ್ಷ ಸುರೇಶ ನಾಯ್ಕ, ಹಿರಿಯ ಸಾಹಿತಿ ಸಾತು ಗೌಡ ಬಡಗೇರಿ, ರಾಜ್ಯ ಸಹಕಾರ್ಯದರ್ಶಿ ಶಿವರುದ್ರಯ್ಯ ಹಿರೇಮಠ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಧರ ಸೈಲ್ ಪ್ರಾರ್ಥಿಸಿದರು. ಪತ್ರಕರ್ತ ಹಾಗೂ ಕಲಾವಿದ ಪ್ರಶಾಂತ ಮಹಾಲೆ ವಂದಿಸಿದರು. ರಂಗಭೂಮಿ ಕಲಾವಿದರ ವೇದಿಕೆಯ ಮಾಜಿ ಅಧ್ಯಕ್ಷ ನಾಗೇಂದ್ರ ಅಂಚೇಕರ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಶ್ರೀಕಾಂತ ಗೌಡ ಬಿಣಗಾ, ಸುನೀಲ ಮ್ಹಾಳಸೇಕರ ಬಿಣಗಾ, ಸಮೀದ ಬಾಂದೇಕರ ಅರಗಾ, ಗಣಪತಿ ಮಹಾಲೆ ತೋಡೂರ, ದಿನೇಶ ಬಾಂದೇಕರ ಚೆಂಡಿಯಾ, ಸಮರ್ಥ ನಾಯ್ಕ ದೇವಳಮಕ್ಕಿ, ಉಲ್ಲಾಸ ಹರಿಕಂತ್ರ, ಶ್ರೀಧರ ಗೌಡ ಸರಳೇಬೈಲ್, ರತ್ನಾಕರ ಗೌಡ ಅಮದಳ್ಳಿ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!