ರೈತರ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಚಿತ್ತಾಪುರ ಪಟ್ಟಣದಲ್ಲಿ ರಸ್ತೆ ತಡೆ ಪ್ರತಿಭಟನೆ | ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲ: ಬೆಣ್ಣೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮುಂಗಾರು ಅತಿವೃಷ್ಟಿ ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಗುರುವಾರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ರಸ್ತೆ ತಡೆ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಬೆಳೆ ಹಾನಿಯಿಂದ ರೈತರು ಸಂಕಷ್ಟದಲ್ಲಿದ್ದರೂ ಸಹ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ, ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲದಂತಾಗಿದೆ. ಬೆಳೆ ಹಾನಿ ಪರಿಹಾರ ಕೇವಲ ಘೋಷಣೆ ಆಗಿದೆ ಆದರೆ ರೈತರಿಗೆ ಮಾತ್ರ ಪರಿಹಾರ ಬಂದಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಪರಿಹಾರ ನೀಡುತ್ತಿಲ್ಲಾ, ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ, ಅತಿವೃಷ್ಟಿ ಸಂದರ್ಭದಲ್ಲೂ ತಲೆ ಕೆಡಿಸಿಕೊಂಡಿಲ್ಲ, ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡಿದರೂ ಸ್ಪಂದಿಸಿಲ್ಲ, ಈಗ ಮೆಕ್ಕೆಜೋಳ ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರವನ್ನು ಪ್ರಾರಂಭಿಸಿಲ್ಲ, ಬೆಳೆ ಹಾನಿಗೆ ಪರಿಹಾರ ಘೋಷಿಸಿ ಒಂದುವರೇ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಮಾತನಾಡಿ, ಜಿಲ್ಲೆಯ ರೈತರ ಗೋಳು ಮತ್ತು ಸಮಸ್ಯೆ ಆಲಿಸದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಎಲ್ಲಾ ಸಮಸ್ಯೆಗೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರ ಕಡೆ ಮುಖ ನೋಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಮಿತವಾಗಿದೆ ಎಂದು ಹೇಳಿದರು.
ಮಹಿಳಾ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ತೆಂಗಳಿ ಮಾತನಾಡಿ, ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರದ (ಬಿ.ಎಸ್.ವೈ) ಅವಧಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ರಾಜ್ಯದ ಬೊಕ್ಕಸದಿಂದ ರೈತರಿಗೆ ನೀಡುತ್ತಿದ್ದ ವರ್ಷಕ್ಕೆ 4 ಸಾವಿರ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವುದನ್ನು ರೈತ ಸಮುದಾಯದ ಪರವಾಗಿ ಖಂಡಿಸುತ್ತೇವೆ ಹಾಗೂ ರೂ.25 ಸಾವಿರ ಶುಲ್ಕಕ್ಕೆ ರೈತರಿಗೆ ನೀಡುತ್ತಿದ್ದು ವಿದ್ಯುತ್ ಟ್ರಾನ್ಸಫಾರ್ಮರ್ ಹಾಗೂ ವಿದ್ಯುತ್ ಸಂಪರ್ಕ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದು ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಿರುವ ಪ್ರತಿ ಟನ್ ಗೆ ರೂ.3300 ರೂಪಾಯಿಗಳನ್ನು ಎಲ್ಲಾ ಜಿಲ್ಲೆಗಳ ರೈತರಿಗೂ ಅನ್ವಯಿಸುವಂತೆ ಮಾಡಬೇಕು ಹಾಗೂ ಕರ್ನಾಟಕ ರಾಜ್ಯ ರೈತರಿಗೆ ಸರ್ಕಾರದ ಸಹಕಾರಿ ಬ್ಯಾಂಕಗಳಿಂದ ಶೂನ್ಯ ಬಡ್ಡಿದರದಲ್ಲಿ ರೂ.10 ಲಕ್ಷದವರೆಗೆ ಸಾಲ ಸೌಲಭ್ಯ ನೀಡಬೇಕು ಹಾಗೂ ರೈತರು ಬಳಸುವ ಕೃಷಿ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಹೆಚ್ಚು ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಸುರೇಶ್ ರಾಠೋಡ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಓದಿ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು,
ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರಾಜ ಭಂಕಲಗಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸುರೇಶ್ ಬೆನಕನಳ್ಳಿ, ನಾಗುಬಾಯಿ ಜಿತುರೆ, ವೀರಣ್ಣ ಯಾರಿ, ದೀಪಕ್ ಹೊಸ್ಸುರಕರ್, ಶೈಲುಗೌಡ ದಿಗ್ಗಾಂವ, ಅಕ್ಕಮಹಾದೇವಿ ನಾಗೇಶ್, ಮಹೇಂದ್ರ ಕೋರಿ, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ ಅಲ್ಲೂರಕರ್, ಶಾಂತಕುಮಾರ್ ಮಳಖೇಡ, ಗುಂಡು ಮತ್ತಿಮುಡು, ಮಹೇಶ್ ಬಾಳಿ, ಬಸವರಾಜ ಸಂಕನೂರ, ಕೋಟೇಶ್ವರ ರೇಷ್ಮಿ, ಶಾಮ್ ಮೇಧಾ, ಚಂದ್ರು ಕಾಳಗಿ, ಆನಂದ ಕಾಶಿ, ಯಮನಪ್ಪ ಬೋಸಗಿ, ಶಂಭು ಕರದಾಳ, ಶಿವರಾಮ ಚವ್ಹಾಣ, ರಮೇಶ್ ಕಾಳನೂರು, ಸಿದ್ದು ರೇಷ್ಮಿ, ರಾಜು ದೊರೆ, ಹರಿ ಗಲಾಂಡೆ, ಉದಯ ಸಿಂಪಿ, ಅಂಬರೀಷ್ ರಂಗನೂರ, ರಾಜು ರಾಠೋಡ ಸೇರಿದಂತೆ ಇತರರು ಇದ್ದರು. ಪಿಎಸ್ಐ ಮಂಜುನಾಥ ರೆಡ್ಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
