ರಟಕಲ್ ಗ್ರಾಮದಲ್ಲಿ ಸಂಭ್ರಮದ ಕಾರಹುಣ್ಣಿಮೆ ಆಚರಣೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ರಟಕಲ್ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಕಾರಹುಣ್ಣಿಮೆ ಸಂಭ್ರಮ ಮನೆ ಮಾಡಿತ್ತು ಮುಂಗಾರು ಆರಂಭದ ಮೊದಲ ಹಬ್ಬ ಕಾರ ಹುಣ್ಣಿಮೆಯಂದು ರೈತರು ತಮ್ಮ ಕೃಷಿ ಕಾರ್ಯದ ಜತೆಗಾರ ಬಸವಣ್ಣನಿಗೆ ವಿಶೇಷ ಪೂಜೆ, ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿದರು.
ಬೆಳಗ್ಗೆಯೇ ರೈತರು ತಮ್ಮ ಎತ್ತುಗಳನ್ನು ನದಿಯಲ್ಲಿ ತೊಳೆದರು ವಿಧವಿಧದ ಬಣ್ಣಗಳು ಹಚ್ಚಿದರು. ಕೊಂಬಿಗೆ ಬಣ್ಣ ಕೊಮ್ಮಣಸು, ಹಣೆಗೆ ಬಾಸಿಂಗ ಕಟ್ಟಿದರು. ಕೊರಳಲ್ಲಿ ಗಂಟೆ ಕಟ್ಟಿ ಮಾಲೆ ಹಾಕಿದರು.
ಗ್ರಾಮದ ಅಗಸಿಯಲ್ಲಿ ಸುಭಾಷ ಪಾಟೀಲ ಹಿರೇಗೌಡರ ನೇತೃತ್ವದಲ್ಲಿ ರೈತರು ಕರಿ ಹರಿದು ಸಂಭ್ರಮಿಸಿದರು. ಭಕ್ತಿಯ ಪೂಜೆ ಸಲ್ಲಿಸಿದರು. ಹೋಳಿಗೆ ಮಾಡಿ ಹಬ್ಬದೂಟ ಸವಿದರು.
ಹಿರೇಗೌಡರ ಮನೆಯಿಂದ ಎತ್ತುಗಳು ಹಾಗೂ ಟ್ರಾಕ್ಟರ್ಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಊರ ಅಗಸಿವರೆಗೆ ತೆರಳಿ ಕರಿ ಹರಿದು ಕಾರಹುಣ್ಣಿಮೆ ಹಬ್ಬ ಆಚರಿಸಲಾಯಿತು. ತಾಲೂಕು ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ, ಸುಬ್ಬಣ್ಣ ಸಿಗಿ, ಚಂದ್ರಕಾಂತ್ ಚಿಕ್ಕಗಿಸಿ, ಜಗ್ಗು ಚಿಕಅಗಿಸಿ, ಶಿವಕುಮಾರ್ ವಳಕಿಂಡಿ ಸೇರಿದಂತೆ ಇನ್ನಿತರ ರೈತರು ಪಾಲ್ಗೊಂಡಿದ್ದರು.

