Oplus_0

ತಡಕಲ್ ನಲ್ಲಿ ಜಗದ್ಗುರುಗಳಿಂದ ಅಂಬಾ ಭವಾನಿ ದೇವಸ್ಥಾನ ಲೋಕಾರ್ಪಣೆ | ಧರ್ಮಾಚರಣೆಯಿಂದ ಶಾಂತಿ- ಸಾಮರಸ್ಯದ ಬದುಕು ಸಾಧ್ಯ: ರಂಭಾಪುರಿ ಶ್ರೀಗಳು

ನಾಗಾವಿ ಎಕ್ಸಪ್ರೆಸ್ 

ಆಳಂದ: ಧರ್ಮಾಚರಣೆಯಿಂದ ಮಾತ್ರ ಶಾಂತಿ ಮತ್ತು ಸಾಮರಸ್ಯದ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ತಡಕಲ್ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಅಂಬಾ ಭವಾನಿ ದೇವಸ್ಥಾನ ಲೋಕಾರ್ಪಣೆಗೊಳಿಸಿ ನಂತರ ನಡೆದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ, ಜಾತಿ, ಪ್ರಾಂತ ಎಂಬುದಾಗಿ ವಿಭಜಿಸುವ ಶಕ್ತಿಗಳ ವಿರುದ್ಧ ಸೌಹಾರ್ದ ಬಾಳ್ವೆ ಮಾಡಲು ಧರ್ಮ ಪರಿಪಾಲನೆ ಅತ್ಯಂತ ಅಗತ್ಯ ಎಂದರು.

ಪ್ರಸಕ್ತ ಸಮಾಜದಲ್ಲಿ ಜಾತಿ, ಜಾತಿಗಳ ನಡುವೆ ವೈಮನಸ್ಸು, ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕುವ ಶಕ್ತಿಗಳ ವಿರುದ್ಧ ಸಮಾಜವು ಸಾಮರಸ್ಯದ ಬದುಕು ಕಾಣಲು ಧರ್ಮ ಸಂಸ್ಕೃತಿ ಆದರ್ಶ ಪರಂಪರೆ ಬೆಳೆಸಿಕೊಂಡು ಎಲ್ಲರೂ ಧರ್ಮ ಆಚರಣೆ ಪಾಲಿಸಬೇಕು. ಜಗದ್ಗುರು ಪೀಠಗಳ ಧರ್ಮ ಪರ ದಶಸೂತ್ರ ಹಾಗೂ ಬಸವಣ್ಣನವರು ಬೋಧಿಸಿದ ಸಪ್ತ ಧರ್ಮ ಸೂತ್ರಗಳನ್ನು ಜನರಿಗೆ ತಿಳಿಸಿ ನಂಬಿಕೆಯ ಬದುಕು ಸಾಗಿಸಬೇಕು. ಮಾನವ ಧರ್ಮ ಹಾಗೂ ವಿಶ್ವ ಬಂಧುತ್ವ ಪಸರಿಸಲು ಮನಸ್ಸು ಪರಿಪಕ್ವವಾಗಬೇಕು. ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ತಡಕಲ್ ನಲ್ಲಿ ಸೇರಿದ ಜನಸಾಗರ ಗುತ್ತೇದಾರರ ಜನಪ್ರಿಯತೆಗೆ ಸಾಕ್ಷಿಯಾಗಿದ್ದು ಶರನ್ನವರಾತ್ರಿ ಮಾದರಿಯ ವೈಭವ ಕಂಡು ಬಂದಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ವಾರಣಾಸಿಯ ಕಾಶಿ ಮಹಾ ಪೀಠದ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಕಂಪ್ಯೂಟರ್ ಯುಗದಲ್ಲಿ ನಾವೆಲ್ಲ ಬದುಕಿದರೂ ನಿಸರ್ಗದ ಅಧೀನದಲ್ಲಿ ಬಾಳ್ವೆ ಮಾಡಬೇಕಾಗಿದೆ. ಧರ್ಮದ ಹಾದಿಯ ಬದುಕಿನಿಂದ ಮಳೆ, ಬೆಳೆ ಸಮೃದ್ಧಿಯಾಗಿ ಮಾನವ ಬದುಕು ಕಲ್ಯಾಣವಾಗುತ್ತದೆ ಎಂದರು.

ವಾರಣಾಸಿಯ ಕಾಶಿ ಮಹಾಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಪಂಚಭೂತಗಳಿಂದ ನಿರ್ಮಿತ ಮಾನವನು ಪರಮಾತ್ಮನ ಅಧೀನವಾಗಿದ್ದು ಸನಾತನ ಧರ್ಮದಲ್ಲಿ ಯಾರೂ ಅನಾಥರಲ್ಲ. ಪರಮಾತ್ಮನೇ ಎಲ್ಲರ ರಕ್ಷಕನಾಗಿ ಭಕ್ತಿ ಭಾವನೆಗೆ ಒಲಿದು ಆಶೀರ್ವದಿಸುತ್ತಾರೆ. ನವರಾತ್ರಿ ಪೂರ್ವದಲ್ಲಿ ಮಂದಿರ ಪ್ರತಿಷ್ಠಾಪನೆ ಮಾಡಿ ಸಂಭ್ರಮ ಸಡಗರದ ವಾತಾವರಣ ಆವರಿಸಿದೆ ಎಂದರು.

ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ , ಭಾರತವು ಮಂದಿರಗಳ ದೇಶ. ಪಾಶ್ಚಾತ್ಯರು ದೇಹವನ್ನು ಪ್ರೀತಿಸಿದರೆ ಭಾರತವು ದೇಶವನ್ನು ಪ್ರೀತಿಸುವ ಪರಂಪರೆ ಹೊಂದಿದೆ. ಎಲ್ಲರಲ್ಲೂ ಭಾರತೀಯರೆಂಬ ಭಾವನೆ ಮೂಡಲಿ, ದೇವಸ್ಥಾನ ನಿರ್ಮಾಣದಿಂದ ಭಗವಂತ ಮತ್ತು ಭಕ್ತರ ನಡುವೆ ಸೇತುವೆ ನಿರ್ಮಾಣವಾಗಿದೆ ಧಾರ್ಮಿಕ ಪರಂಪರೆ ಪಾಲನೆಯ ಗುತ್ತೇದಾರ ಕುಟುಂಬದ ಧರ್ಮ ಕಾರ್ಯ ಶ್ಲಾಘನೀಯ ಎಂದರು.

ಕಡಗಂಚಿ ಕಟ್ಟಿಮಠದ ಶ್ರೀ ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು, ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಪ್ರಾಸ್ತವಿಕವಾಗಿ ಮಾತನಾಡಿ, ತಾಯಿಯನ್ನು ಬಾಲ್ಯದಲ್ಲೇ ಕಳೆದುಕೊಂಡು ಮುಖ ನೋಡುವ ಭಾಗ್ಯ ಕೂಡ ಸಿಗಲಿಲ್ಲ. ತಾಯಿ ಅಂಬುಬಾಯಿ ಅವರ ರೂಪದಲ್ಲಿ ಮಂದಿರದಲ್ಲಿ ಶ್ರೀ ಅಂಬಾ ಭವಾನಿಯನ್ನು ಪ್ರತಿಷ್ಠಾಪಿಸಿ ಸಂಕಲ್ಪ ಈಗ ಈಡೇರಿದೆ. ಬಡತನದಲ್ಲಿ ಬೆಳೆದು ತಂದೆ, ತಾಯಿ, ಅಜ್ಜಂದಿರ ಕೃಪಾಶೀರ್ವಾದದಿಂದ ಹಾಗೂ ಅಳಂದ ತಾಲೂಕಿನ ಜನರ ಆಶೀರ್ವಾದದಿಂದ ಬೆಳೆಯಲು ಸಾಧ್ಯವಾಗಿದೆ, ಮುಗಿದ ಕೈ ಬಾಗಿದ ತಲೆಯೊಂದಿಗೆ ಬಾಳಲು ಎಲ್ಲರೂ ಪ್ರೋತ್ಸಾಹಿದ್ದಾರೆ ಎಂದು ಹೇಳಿದರು.

ಹರ್ಷಾನಂದ ಗುತ್ತೇದಾರ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಿಗವಾನ್- ನಿರಗುಡಿ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ನಂದಗಾಂವ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿ, ಅಫಜಲಪುರ ಮಳೇಂದ್ರ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸೇರಿದಂತೆ ಹಲವು ಮಠಗಳ ಪೂಜ್ಯರು, ಮಾಜಿ ಸಚಿವ ಮಾಲಿಕಯ್ಯ ವಿ ಗುತ್ತೇದಾರ, ಮಾಜಿ ಸಂಸದ ಡಾ. ಉಮೇಶ್ ಜಾಧವ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ, ಮುಖಂಡರಾದ ಶಿವಕಾಂತ್ ಮಹಾಜನ್, ಸಂತೋಷ್ ಎಸ್ ಗುತ್ತೇದಾರ, ಶಿವರಾಜ್ ರದ್ದೇವಾಡಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ 1008 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಜಗದ್ಗುರುಗಳು ಹಾಗೂ ಪೂಜ್ಯರನ್ನು ಕುಂಭ ಹೊತ್ತ ಮುತ್ತೈದೆಯರು ಭಕ್ತಿಯಿಂದ ಸ್ವಾಗತಿಸಿದರು, ನಂತರ ಮೂವರು ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ನಿಮಿತ್ತ ರಕ್ತದಾನ ಶಿಬಿರ ಕೂಡ ನೆರವೇರಿತು.

“ತಡಕಲ್ ಗ್ರಾಮಕ್ಕೆ ಜಗದ್ಗುರುಗಳ ಆಗಮನ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಂಭ್ರಮದಿಂದ ಪ್ರಕೃತಿ ಕೂಡ ಒಲಿದು ಮಳೆ ಸುರಿದು ಭೂಮಿ ತಂಪಾಗಿದೆ. ಸುಭಾಷ್ ಗುತ್ತೇದಾರ್ ಬಡತನದ ಜೀವನ ಮಾಡಿದರೂ ಅವರ ಧಾರ್ಮಿಕ ಪ್ರವೃತ್ತಿಯಿಂದ ಉನ್ನತ ಆದರ್ಶ ಮೈಗೂಡಿಸಿ ಜನಪ್ರೀತಿಗೆ ಪಾತ್ರರಾಗಿದ್ದಾರೆ”.-ಮಾಲಿಕಯ್ಯ ವಿ ಗುತ್ತೇದಾರ ಮಾಜಿ ಸಚಿವರು ಕಲಬುರಗಿ.

ಸುಭಾಷ್ ಗುತ್ತೇದಾರರು ತಮ್ಮ ಸಾತ್ವಿಕ ಹಾಗೂ ಧಾರ್ಮಿಕ ಪರಂಪರೆಯ ಜೀವನ ಮಾಡಿ ಅಪಾರ ಜನಪ್ರೀತಿಗೆ ಪಾತ್ರರಾಗಿದ್ದಾರೆ. ಮಂದಿರ ಲೋಕಾರ್ಪಣೆ ಕಾರ್ಯಕ್ಕೆ ಸೇರಿದ ಜನಸ್ತೋಮವೇ ಇದಕ್ಕೆ ಸಾಕ್ಷಿ ಇನ್ನೂ ಅವರು ಹತ್ತು ವರ್ಷಗಳ ಕಾಲ ರಾಜಕೀಯ ಮಾಡಲು ಸಮರ್ಥರಿದ್ದು ಎಲ್ಲರ ಪ್ರೀತಿಯ ಆಶೀರ್ವಾದ ಅವರ ಮೇಲಿದೆ”.-ಡಾ ವೀರ ಸೋಮೇಶ್ವರ ದೇಶ ಕೇಂದ್ರ ಶಿವಾಚಾರ್ಯರು, ಶ್ರೀ ರಂಭಾಪುರಿ ಮಠ ಬಾಳೆಹೊನ್ನೂರು.

Spread the love

Leave a Reply

Your email address will not be published. Required fields are marked *

error: Content is protected !!