ವಾಡಿ ಬಿಜೆಪಿ ಕಚೇರಿಯಲ್ಲಿ ವೀರ ಸಾವರ್ಕರ್ ಪುಣ್ಯ ಸ್ಮರಣೆ | ಸಾವರ್ಕರ್ ಸ್ವಾಭಿಮಾನದ ಸರ್ವಸ್ವ: ಯಾರಿ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವೀರ ಸಾವರ್ಕರ್ ರ 60ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಿನಾಯಕ ದಾಮೋದರ್ ಸಾವರ್ಕರ್ ಹೆಸರು ಕೇಳಿದರೆ ಈಗಲೂ ನಮ್ಮ ಮೈ ಮನ ರೋಮಾಂಚನಗೊಳ್ಳುತ್ತದೆ, ಅವರು ನಮ್ಮ ಸ್ವಾಭಿಮಾನದ ಸರ್ವಸ್ವ ಎಂದರು.
ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ತೆಗೆದುಕೊಂಡ ನಿಲುವುಗಳು ಈಗಲೂ ಈ ಮಣ್ಣಿನ ಯುವಕರಿಗೆ ಸ್ಪೂರ್ತಿದಾಯಕ. ತಾಯಿ-ತಂದೆಯನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರೂ ಎದೆಗುಂದದೆ ವಿದ್ಯಾಭ್ಯಾಸಕ್ಕೆ ಹೆಚ್ಚು ಮೊರೆ ಹೋದ ಸಾವರ್ಕರ್ ಅವರು, ಅಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸುವಲ್ಲಿ ಪ್ರಚಲಿತವಿದ್ದ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯು ಅವರಿಗೆ ಗಾಢವಾಗಿ ಪ್ರಭಾವ ಬೀರಿತು ಎಂದು ಹೇಳಿದರು.
ಮುಂದೆ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದರು. ಇನ್ನೂ ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಾವರ್ಕರ್ ಪಾತ್ರರಾಗಿದ್ದರು. ಆದರೆ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ನೀರಾಕರಿಸಿದ್ದಕ್ಕೆ ವಕೀಲ ಬಿರುದು ನೀಡಲಿಲ್ಲ. ಲಂಡನ್‌ನಲ್ಲಿದ್ದಾಗ ಸ್ವತಂತ್ರ ಭಾರತ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು ಎಂದು ಹೇಳಿದರು.
ಗಾಂಧಿ ಹತ್ಯೆಯಲ್ಲಿ ಒಂದೊಮ್ಮೆ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ ತಮ್ಮ 83ನೇ ವಯಸ್ಸಿನಲ್ಲಿ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು ಫೆ. 26 ರಂದು ದೇಹತ್ಯಾಗ ಮಾಡಿ ಅಮರರಾದರು. ಸಮವಸ್ತ್ರ ಧರಿಸಿದ 2500 ಸ್ವಯಂಸೇವಕರಿಂದ ಗೌರವ ಪಡೆದ ಏಕೈಕ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್, ಅದಕ್ಕಾಗಿ ಅವರು ಇಂದಿಗೂ ನಮ್ಮ ಸ್ವಾಭಿಮಾನದ ಸರ್ವಸ್ವ ವಾಗಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ತಾಲೂಕು ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿಶನ ಜಾಧವ, ಮುಖಂಡರಾದ ಶರಣಗೌಡ ಚಾಮನೂರ, ಗಿರಿಮಲ್ಲಪ್ಪ ಕಟ್ಟಿಮನಿ, ರವೀಂದ್ರ ನಾಯಕ, ಅಂಬದಾಸ ಜಾಧವ, ಕುಮಾರ ಜಾಧವ, ಬಸವರಾಜ ಹೇಮಾನಿ, ಹೀರಾಸಿಂಗ ರಾಠೋಡ, ರಂಗಪ್ಪ ದೊರೆ, ಚಂದರ ಚವ್ಹಾಣ, ಮಲ್ಲಿಕಾರ್ಜುನ ಪುಜಾರಿ ಸೇರಿದಂತೆ ಇತರರು ಇದ್ದರು.

