ಚಿತ್ತಾಪುರದಲ್ಲಿ ಶಾಂತಿ ಸಭೆ
ಸರ್ಕಾರದ ನಿಯಮಗಳು ಪಾಲಿಸಿ ಗಣೇಶ ಉತ್ಸವ ಶಾಂತಿಯುತವಾಗಿ ಆಚರಿಸಿ: ಡಿವೈಎಸ್ಪಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ದಿಂದ ವಿಸರ್ಜನೆ ಮಾಡುವ ಹಂತದವರೆಗೆ ಗಣೇಶ ಮಂಡಳಿಯವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜಾಗೃತೆ ವಹಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರದ ಮತ್ತು ಸ್ಥಳೀಯ ತಾಲೂಕು ಆಡಳಿತದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿಯುತ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ್ ಉತ್ಸವ ನಿಮಿತ್ತ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ್ ಮಂಡಳಿಗಳ ಅಧ್ಯಕ್ಷ ಪದಾಧಿಕಾರಿಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ ವಿಸರ್ಜನೆ ಮಾಡುವ ಮುಂಚೆ ಎಲ್ಲ ಗಣೇಶ ಮಂಡಳಿಯವರು ಸಂಜೆ ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಸೇರಬೇಕು ಅಲ್ಲಿಂದಲೇ ಒಂದೇ ಬಾರಿಗೆ ಸಾಲಾಗಿ ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು.
ಬೆಳಕು ಇರುವಾಗಲೇ ಮೆರವಣಿಗೆ ಪ್ರಾರಂಭ ಮಾಡಿ ತಡರಾತ್ರಿ ಮಾಡಿದೇ ನಿಗದಿತ ಸಮಯದಲ್ಲಿ ವಿಸರ್ಜನೆ ಮಾಡಿ ಎಂದು ಕಿವಿಮಾತು ಹೇಳಿದರು. ಒಟ್ಟಿನಲ್ಲಿ ಎಲ್ಲರೂ ಕೂಡಿಕೊಂಡು ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದರು.
ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ ಮಾತನಾಡಿ, ಕೋರ್ಟ್ ಹಿಂದುಗಡೆ ಗಣೇಶ ವಿಸರ್ಜನೆ ಮಾಡುವ ಬಾವಿಯ ಸುತ್ತ ಬ್ಯಾರಿಕೇಡ್, ಬೆಳಕಿನ ವ್ಯವಸ್ಥೆ, ರಸ್ತೆ ಸುಧಾರಣೆ ಸೇರಿದಂತೆ ಗಣೇಶ ಮೂರ್ತಿಗಳನ್ನು ಕ್ರೇನ್ ಮೂಲಕ ಬಾವಿಯಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಿ ಎಲ್ಲರೂ ಶಾಂತಿಯುತ ಗಣೇಶ ಉತ್ಸವ ಆಚರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಶರಣಪ್ಪ ನಾಟೀಕಾರ, ಪುರಸಭೆ ಅಧಿಕಾರಿ ವೆಂಕಟೇಶ್ ಹವಾಲ್ದಾರ್ ಮಾತನಾಡಿದರು.
ಪಿಎಸ್ಐ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ, ವಿವಿಧ ಗಣೇಶ ಮಂಡಳಿಯ ಆನಂದ ಪಾಟೀಲ ನರಿಬೋಳ, ರಾಜೇಶ್ ಹೊಳಿಕಟ್ಟಿ, ಅಂಬರೀಷ್ ಸುಲೇಗಾಂವ್, ವಿಠ್ಠಲ್ ಕಟ್ಟಿಮನಿ, ಅಮುಲ್ ತಿರುಮಲ್, ತಿಪ್ಪಣ್ಣ ಇಶಣಿ, ನಾಗೇಂದ್ರ ತಳವಾರ, ಅಯ್ಯಣ್ಣ ಸೇರಿದಂತೆ ಅನೇಕರು ಇದ್ದರು. ಬಾಬು ನಿರೂಪಿಸಿದರು.