ಚಿತ್ತಾಪುರದಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಡಿಎಪಿ ಮಾರಾಟ, ರೈತರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಸ್ಥಾಪಿಸಿದ್ದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಡಿಎಪಿ ವಿತರಣೆ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದಕ್ಕೆ ರೈತರು ಉಗ್ರವಾಗಿ ಖಂಡಿಸಿ ಪ್ರತಿಭಟಿಸಿದ ಪ್ರಸಂಗ ಭಾನುವಾರ ನಡೆಯಿತು.
ಸರ್ಕಾರದ ದರ 1350 ಇದೆ ಆದರೆ 150 ರೂ. ಹೆಚ್ಚಿಗೆ ಪಡೆಯುವ ಮೂಲಕ ಒಟ್ಟು ರೂ.1500 ಪಡೆಯುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ 1350 ರೂ. ಬಿಲ್ ನೀಡಿ 1500 ರೂ. ಪಡೆಯುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ನಾವು ಚೀಟಿ ತೆಗೆದುಕೊಂಡು ದಿನನಿತ್ಯ ಸರತಿ ಸಾಲಿನಲ್ಲಿ ನಿಂತರೂ ನಮಗೆ ಡಿಎಪಿ ಸಿಗುವುದಿಲ್ಲ ಆದರೆ ಎಲ್ಲೊ ಕುಳಿತುಕೊಂಡ ಪ್ರಭಾವಿಗಳು, ರಾಜಕಾರಣಿಗಳು ಟ್ರಾಕ್ಟರ್ ಗಂಟಲೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ಒರಿಜಿನಲ್ ಬಿಲ್ ಬೇರೆ ಹಾಗೂ ಡುಪ್ಲಿಕೇಟ್ ಬಿಲ್ ಬೇರೆ ಇದೆ, ಹೀಗಾಗಿ ಇಲ್ಲಿ ಗೋಲ್ಮಾಲ್ ನಡೆದಿದೆ ಎಂದು ರೈತ ಶಿವಾನಂದ ಬಂಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಡಿಎಪಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಜೆಡಿ ಸಮದ್ ಪಟೇಲ್ ಹೇಳಿದ್ದಾರೆ, ಆದರೂ ಕೂಡ ಅದು ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ಬಂದಂತೆ ನಡೆದುಕೊಳ್ಳುತ್ತಿದ್ದಾರೆ, ಈ ಕುರಿತು ಜೆಡಿ ಹಾಗೂ ಎಡಿ ಮಾನಕರೆ ಅವರಿಗೆ ಕಾಲ್ ಮಾಡಿದರೂ ಸ್ವೀಕರಿಸಿಲ್ಲ ಎಂದು ಗೌರಿಶಂಕರ ಬಂಡಿ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ಚೀಲ ಡಿಎಪಿಗಾಗಿ ಮೂರು ದಿನಗಳಿಂದ ಯರಗಲ್ ಗ್ರಾಮದಿಂದ ಚಿತ್ತಾಪುರ ಕ್ಕೆ ಬರುತ್ತಿದ್ದೇನೆ ಆದರೂ ಡಿಎಪಿ ಸಿಗುತ್ತಿಲ್ಲ ಎಂದು ರೈತ ಮಹಿಳೆ ಭೀಮಬಾಯಿ ಯರಗಲ್ ತಮ್ಮ ಅಳಲನ್ನು ತೋಡಿಕೊಂಡರು.
ಡಿಎಪಿಗಾಗಿ ಎಲ್ಲ ಕೆಲಸಗಳನ್ನು ಬಿಟ್ಟು ಕಳೆದ ಎಂಟು ದಿನಗಳಿಂದ ಇಟಗಾ ಗ್ರಾಮದಿಂದ ಚಿತ್ತಾಪುರ ಕ್ಕೆ ಬರುತ್ತಿದ್ದೇನೆ, ದಿನನಿತ್ಯ ಬಂದರೂ ನಾಳೆ ಬಾ, ನಾಳೆ ಬಾ ಅಂತ ಅನ್ನುತ್ತಾರೆ ಹೀಗಾದರೆ ರೈತರ ಗೋಳು ಯಾರು ಕೇಳಬೇಕು ಎಂದು ರೈತ ಮಹಿಳೆ ಸುಜಾತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ರೈತರಾದ ಶಿವಾನಂದ ಬಂಡಿ, ರವಿಕುಮಾರ ರಾಠೋಡ, ಗೌರಿಶಂಕರ ಬಂಡಿ, ರೇವಣಸಿದ್ದಪ್ಪ ಸಾತನೂರ, ಅಕ್ಬರ್ ಅಲಿ, ಶಿವುಕುಮಾರ ದೊಡ್ಡಮನಿ, ಅಬ್ದುಲ್ ಗಫೂರ್, ಬಸ್ಸು ಬೊಮ್ಮನಳ್ಳಿ, ಐಲರೆಡ್ಡಿ ಯರಗಲ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಿದರು.
“ರೈತರ ಅನುಕೂಲಕ್ಕಾಗಿ ಟಿಎಪಿಸಿಎಂಎಸ್ ವತಿಯಿಂದ ಡಿಎಪಿ ವಿತರಣೆ ಕಾರ್ಯ ಮಾಡಲಾಗುತ್ತಿದೆ, ರೈತರಲ್ಲದವರು ಇಲ್ಲಸಲ್ಲದ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ, ಸರ್ಕಾರ ನಿಗದಿಪಡಿಸಿದ ದೂರದಲ್ಲಿಯೇ ಡಿಎಪಿ ಮಾರಾಟ ಮಾಡಲಾಗುತ್ತಿದೆ”.-ದೇವಿಂದ್ರ ಅರಣಕಲ್ ಅಧ್ಯಕ್ಷರು ಟಿಎಪಿಸಿಎಂಎಸ್ ಚಿತ್ತಾಪುರ.

