ಪ್ರಜ್ಞಾ ಅಕಾಡೆಮಿ ಉಜ್ವಲವಾಗಿ ಬೆಳೆಯಲಿ: ಡಾ. ಶಿವಕುಮಾರ್ ಅಭಿಮತ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಪ್ರಜ್ಞಾ ಅಕಾಡೆಮಿಯನ್ನು ಇಂದು ಕಲಬುರಗಿಯಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಉಜ್ವಲವಾಗಿ ಬೆಳೆಯಲಿ ಎಂದು ಬೆಂಗಳೂರಿನ ಅಕ್ಕಾ ಐ.ಎ.ಎಸ್. ಅಕಾಡೆಮಿ ನಿರ್ದೇಶಕರಾದ ಡಾ. ಶಿವಕುಮಾರ್ ಆಶಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ, ಕೈಗೆಟುಕುವ ಮತ್ತು ಫಲಿತಾಂಶಾಧಾರಿತ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಪ್ರಜ್ಞಾ ಅಕಾಡೆಮಿಯು ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಈ ಭಾಗದ ಸ್ಪರ್ಧಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಕೆ.ಎಂ. ವಿಶ್ವನಾಥ ಮರತೂರ ಅವರು, ತಮ್ಮ ಅಕಾಡೆಮಿಯಲ್ಲಿ ಐ.ಎ.ಎಸ್., ಕೆ.ಎ.ಎಸ್., ಪಿ.ಎಸ್.ಐ., ಪಿ.ಡಿ.ಓ., ಬ್ಯಾಂಕಿಂಗ್, ರೈಲ್ವೆ ಮತ್ತು ಇತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಫೌಂಡೇಶನ್ ಕೋರ್ಸ್, ಎನ್.ಸಿ.ಇ.ಆರ್.ಟಿ. ಆಧಾರಿತ ತರಬೇತಿ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಸಂದರ್ಶನ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದರು.
ಕರ್ನಾಟಕದ ಬಡ, ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ವಿಶೇಷ ನೆರವು ನೀಡುವ ಮೂಲಕ ಕಡಿಮೆ ಶುಲ್ಕದಲ್ಲಿ ಉತ್ತಮ ತರಬೇತಿ ನೀಡುವುದೇ ತಮ್ಮ ಉದ್ದೇಶವೆಂದು ಅವರು ತಿಳಿಸಿ, ಈ ಭಾಗದ ಸ್ಪರ್ಧಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಅನುಭವಿ ಬೋಧಕ ವೃಂದ, ನವೀನ ಬೋಧನಾ ವಿಧಾನಗಳು, ಡಿಜಿಟಲ್ ಸ್ಮಾರ್ಟ್ ಕ್ಲಾಸ್ರೂಮ್, ನಿಯಮಿತ ಪರೀಕ್ಷೆಗಳು, ವೈಯಕ್ತಿಕ ಮಾರ್ಗದರ್ಶನ, ಉತ್ತರ ಬರವಣಿಗೆ ಅಭ್ಯಾಸ, ಅಧ್ಯಯನ ಗ್ರಂಥಾಲಯ ಹಾಗೂ ವೃತ್ತಿ ಸಲಹಾ ಸೇವೆಗಳು ಅಕಾಡೆಮಿಯ ವಿಶೇಷತೆಗಳಾಗಿವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾ ಕಾಲೇಜಿನ ಮುಖ್ಯಸ್ಥ ಶಿವಾನಂದ ಖಜೂರಿ ಅವರು, ತಮ್ಮ ವಿದ್ಯಾರ್ಥಿಯಾಗಿದ್ದ ವಿಶ್ವನಾಥ ಅವರು ಪ್ರಜ್ಞಾ ಅಕಾಡೆಮಿ ಪ್ರಾರಂಭಿಸಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು. ಇದು ತಮ್ಮ ಕನಸೂ ಆಗಿತ್ತು ಎಂದೂ, ವಿಶ್ವನಾಥ ಅವರು ಅದನ್ನು ನನಸಾಗಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಸತತ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ದೃಢ ನಿರ್ಧಾರಗಳ ಮೂಲಕ ಪ್ರಜ್ಞಾ ಅಕಾಡೆಮಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ನಾಗರಾಜ ಹೆಬ್ಬಾಳ ಅವರು, ಪ್ರಜ್ಞಾ ಅಕಾಡೆಮಿಯು ಮುಂಬರುವ ದಿನಗಳಲ್ಲಿ ಸಾವಿರಾರು ಯುವಕರಿಗೆ ಗುಣಮಟ್ಟದ ಶಿಕ್ಷಣ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸರ್ಕಾರಿ ಸೇವೆ ಸೇರುವ ಕನಸನ್ನು ನನಸಾಗಿಸುವ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ತಜ್ಞರು, ಸಮಾಜದ ಗಣ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿ ಅಕಾಡೆಮಿಗೆ ಶುಭ ಹಾರೈಸಿದರು. ಉಷಾದೇವಿ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.
