Oplus_0

ಲಾಡ್ಲಾಪುರ-ಅಳ್ಳೋಳ್ಳಿ ಹದಗೆಟ್ಟ ರಸ್ತೆ, ಸಂಚಾರಕ್ಕೆ ಸಂಚಕಾರ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಲಾಡ್ಲಾಪುರ-ಅಳ್ಳೋಳ್ಳಿ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಸಂಚಕಾರ ಉಂಟಾಗಿ ಪ್ರಯಾಣಿಕರು, ವ್ಯಾಪಾರಿಗಳು, ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಮಾಜ ಸೇವಕ ಶಾಂತಕುಮಾರ್ ಎಣ್ಣೆ ತಿಳಿಸಿದ್ದಾರೆ.

ಲಾಡ್ಲಾಪುರ ಬಸ್ ನಿಲ್ದಾಣದಿಂದ 1 ಕಿಮೀ ರಸ್ತೆ ತಗ್ಗುಗಳಿಂದ ರಾಡಿಯಿಂದ ಸಂಪೂರ್ಣ ಹದಗೆಟ್ಟು ಇದೇ ರಸ್ತೆಯ ಮೇಲೆ ಶುಕ್ರವಾರ ವಾರದ ಸಂತೆ ನಡೆಯಲಿದೆ, ಇದೇ ರಸ್ತೆಯ ಮೇಲೆ ಪ್ರತಿನಿತ್ಯ ವಾಹನ ಸವಾರರು ಪಾದಾಚಾರಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ, ದಿನಾಲು ಸಾಕಷ್ಟು ಜನ ದ್ವಿಚಕ್ರವಾಹನ ಸವಾರರು ಬೀಳುತ್ತಿದ್ದಾರೆ, ಈ ಕುರಿತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಕೇಳಿದರೆ ಕುಂಟು ನೆಪ ಹೇಳುತ್ತಾ ದಿನದೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಈ ರಸ್ತೆ ಕುರಿತು ಹಲವು ಬಾರಿ ರಸ್ತೆ ತಡೆ, ಸಸಿ ನೆಡುವ ಪ್ರತಿಭಟನೆಗಳು ಮಾಡಲಾಗಿದೆ ನಂತರ ಲಾಡ್ಲಾಪುರದಿಂದ 2 ಕಿಮೀ ರಸ್ತೆ ಅಭಿವೃದ್ಧಿಗೆ 1 ಕಿಮೀ ಸಿಸಿ ರಸ್ತೆ 1 ಕಿಮೀ ಡಾಂಬರ್ ರಸ್ತೆ ನಿರ್ಮಾಣಕ್ಕೆ 4 ಕೋಟಿ ಅನುದಾನ ಮಂಜುರಾಗಿದ್ದು ಅದರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಭಿವೃದ್ಧಿ ಕೆಲಸ ಆರಂಭಗೊಳ್ಳುವುದಕ್ಕಿಂತ ಮುಂಚೆ ಸಂಚಾರ ಅನಕೂಲಕ್ಕಾಗಿ ತಾತ್ಕಾಲಿಕ ರಸ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾ ಬರುತ್ತಿದ್ದಾರೆ ಆದರೆ ಇಲ್ಲಿಯವರೆಗೆ ಏನು ಮಾಡಿಲ್ಲ ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ತಕ್ಷಣ ತಾತ್ಕಾಲಿಕ ರಸ್ತೆ ಸುಧಾರಣೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ಹೋರಾಟ ಕೈಕೊಳ್ಳಬೇಕಾಗುತ್ತದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಾಡಿ ನಿಜಾಂ ರೈಲ್ವೆ ಗೇಟ್ ನಾಲ್ಕು ದಿನಗಳಿಂದ ಕೆಲಸ ನಡೆದಿದ್ದರಿಂದ ಕಲಬುರಗಿಯಿಂದ ಮತ್ತು ಚಿತ್ತಾಪುರದಿಂದ ಯಾದಗಿರಿಗೆ ಹೋಗುವ ಎಲ್ಲಾ ವಾಹನಗಳು, ಲಾರಿಗಳು ಇದೇ ಮಾರ್ಗವಾಗಿ ಹೋಗುತ್ತಿರುವುದರಿಂದ ಈ ರಸ್ತೆ ಮತ್ತಷ್ಟು ಹದಗೆಟ್ಟು ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತೆ ಮಾಡಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಲಾಡ್ಲಾಪುರ-ಅಳ್ಳೋಳ್ಳಿ ರಸ್ತೆ ನಿರ್ಮಾಣ ಕಾಮಗಾರಿಯ ಟೆಂಡರ್ ಮಾಡಿ ಒಂದು ತಿಂಗಳಾದರೂ ಇನ್ನೂ ಕೂಡಾ ಕೆಲಸ ಪ್ರಾರಂಭ ಮಾಡಿಲ್ಲ ಹಾಗೂ ತಾತ್ಕಾಲಿಕ ರಸ್ತೆ ಕೂಡಾ ಮಾಡ್ತಾ ಇಲ್ಲ ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು”.-ಈರಣ್ಣ ಮಲಕಂಡಿ ಮಾಜಿ ಅಧ್ಯಕ್ಷರು ಗ್ರಾಪಂ ಲಾಡ್ಲಾಪುರ.

Spread the love

Leave a Reply

Your email address will not be published. Required fields are marked *

You missed

error: Content is protected !!