ಮೋದಿ ಮನ್ ಕೀ ಬಾತ್ ನಲ್ಲಿ ಕಲಬುರಗಿ ತೊಗರಿಗೆ ಶ್ಲಾಘನೆ, ರೈತರಿಗೆ ವರದಾನ: ಡಾ ಉಮೇಶ್ ಜಾಧವ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಏಷ್ಯಾದ ತೊಗರಿಯ ಕಣಜ ಎಂದೇ ಖ್ಯಾತಿ ಪಡೆದ ಕಲಬುರಗಿಯ ತೊಗರಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಕಾಶವಾಣಿಯ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿ ರೈತರ ತೊಗರಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟಿದ್ದಾರೆ, ಇದು ರೈತರ ಪಾಲಿಗೆ ವರದಾನವಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ
ಪ್ರಧಾನ ಮಂತ್ರಿ ಮೋದಿಯವರು ಅ.25 ರಂದು ಭಾನುವಾರ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಕಲ್ಯಾಣ ಕರ್ನಾಟಕದ ಹೆಮ್ಮೆಯ ತೊಗರಿಯ ಬೆಳೆಯ ಬಗ್ಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿರುವುದನ್ನು ಪ್ರಸ್ತಾಪಿಸಿ ಪ್ರಸ್ತುತ ಕಲಬುರಗಿಯ ತೊಗರಿಯ ಬಗ್ಗೆ ಜಗದಗಲ ಕುತೂಹಲ ಮೂಡಿಸಿದ್ದಾರೆ ಮತ್ತು ಕಲ್ಯಾಣ ಕರ್ನಾಟಕದ ರೈತರ ತೊಗರಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ. ವೋಕಲ್ ಫಾರ್ ಲೋಕಲ್ ಎಂಬ ಮೋದಿಯವರ ಪರಿಕಲ್ಪನೆಯಂತೆ ಸ್ಥಳೀಯ ಉತ್ಪನ್ನ ತೊಗರಿ ಜಾಗತಿಕ ಮಾರುಕಟ್ಟೆಗೆ ತಲಫಿದ ವಿಷಯ ಪ್ರಸ್ತಾಪಿಸಿ ಇದೀಗ ತೊಗರಿಯ ರೈತರಿಗೆ ಇನ್ನಷ್ಟು ಹೊಸ ಮಾರುಕಟ್ಟೆಗೆ ಅವಕಾಶ ತೆರೆದುಕೊಳ್ಳಲಿದೆ.
ಈಗಾಗಲೇ ಕಲಬುರಗಿ ರೊಟ್ಟಿ ಬ್ರಾಂಡ್ ಎಲ್ಲೆಡೆ ಲಭ್ಯವಾಗುತ್ತಿತ್ತು ಮಾಲ್ ಗಳಲ್ಲಿ ಕೂಡ ಸಿಗುತ್ತಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದೆ. ಕಲಬುರಗಿಯ ತೊಗರಿ ಮಾಲ್ದಿವ್ಸ್ ಗೆ ರಫ್ತಾಗುತ್ತಿದ್ದು ಮುಂದಿನ ದಿನಗಳಲ್ಲಿ ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಅಮೆರಿಕ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಜಾಗತಿಕ ಮಾರುಕಟ್ಟೆ ವಿಸ್ತರಣೆಯಾಗುವ ಸಂಭವವಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರೈತರಿಗೆ ಆದಾಯ ಹೆಚ್ಚಳ ಮಾಡುವ ಪ್ರಯತ್ನಕ್ಕೆ ಮೋದಿಯವರ ಭಾಷಣ ಪ್ರೇರಣೆ ನೀಡಲಿದೆ ಎಂದು ಡಾ. ಜಾಧವ್ ತಿಳಿಸಿದ್ದಾರೆ.

