ಕರ್ನಾಟಕ ರಾಜ್ಯೋತ್ಸವ | ಕನ್ನಡ ಜೀವ ಭಾಷೆ, ಜೀವನ ಕಟ್ಟಿಕೊಡುವ ಭಾಷೆಯಾಗಬೇಕು: ಪಾಲಾಮೂರ್
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ಒಬ್ಬ ಅಧಿಕಾರಿಯಿಂದ, ಒಂದು ಸಮಿತಿಯಿಂದ ಕನ್ನಡ ಬೆಳೆಯಲಾರದು. ಕನ್ನಡದ ಕೆಲಸ ಜನಸಾಮಾನ್ಯನಿಂದ ಹಿಡಿದು ವಿಧಾನಸೌಧದವರೆಗೆ ಮುಟ್ಟಬೇಕು. ನಾವು ಬಣ್ಷ ಮತ್ತು ರಕ್ತದಲ್ಲಿ ಮಾತ್ರ ಕನ್ನಡಿಗರಾಗಿದ್ದೇವೆ. ಆದರೆ ಬುದ್ದಿ-ಶಿಕ್ಷಣದಲ್ಲಿ ಅನ್ಯಭಾಷಿಕರನ್ನು ಅನುಸರಿಸುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಆಯಾ ರಾಜ್ಯಭಾಷೆ ಕಲಿಯದೇ ಬದುಕುವುದು ಸಾಧ್ಯವಿಲ್ಲ ಎಂಬುವ ವಾತವರಣ ಇದ್ದರೆ ನಮ್ಮಲ್ಲಿ ವಿಪರ್ಯಾಸ ಸ್ಥಿತಿ ಇದೆ, ಕನ್ನಡ ನಮ್ಮ ಜೀವ ಭಾಷೆಯಾಗಬೇಕು ಹಾಗೂ ನಮ್ಮ ಜೀವನ ಕಟ್ಟಿಕೊಡುವ ಭಾಷೆಯಾಗಬೇಕು ಎಂದು ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಹೇಳಿದರು.
ಪಟ್ಟಣದಲ್ಲಿ ತಾಲೂಕಾ ಆಡಳಿತ ಏರ್ಪಡಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡದ ಪ್ರದೇಶಗಳೇ ಆಗಿದ್ದ ಸೋಲ್ಲಾಪೂರ, ಕೊಲ್ಲಾಪೂರ, ಸಾಂಗ್ಲಿ, ನಾಂದೇಡ್, ಉಸ್ಮಾನಬಾದ್, ಕಾಸರಗೋಡು ಒಳಗೊಂಡು 13 ಜಿಲ್ಲೆಗಳನ್ನು ನಾವು ಅನ್ಯರಿಗೆ ಬಿಟ್ಟುಕೊಟ್ಟಿದ್ದೇವು. ಇವತ್ತಿಗೂ ಮಹಾರಾಷ್ಟ್ರದವರು ಬೆಳಗಾವಿ ತಮಗೆ ಸೇರಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ. 30 ರಷ್ಟಿದೆ. ಪರಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕ ವಲಸಿಗರ ಗೂಡಾಗುವುದರಲ್ಲಿ ಅನುಮಾನವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಎಲ್ಲಾ ಕಚೇರಿ ಪತ್ರ ವ್ಯವಹಾರ ಕನ್ಮಡ ಭಾಷೆಯಲ್ಲೇ ನಡೆಯಬೇಕು. ಎಲ್ಲಾ ಅಂಗಡಿಗಳ ಮೇಲೆ ಕನ್ನಡ ನಾಮಫಲಕ ಹಾಕಬೇಕು ಎಂದರು. ಉಪನ್ಯಾಸಕ ಮೀರಾಜ್ ಫಾಶಾ ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ವೇದಿಕೆಯಲ್ಲಿ ಡಿವೈಎಸ್.ಪಿ ಸಂಗಮನಾಥ ಹಿರೇಮಠ, ತಾ.ಪಂ.ಕಾರ್ಯನಿರ್ವಣಾಧಿಕಾರಿ ಸಂತೋಷಕುಮಾರ ಚವ್ಹಾಣ, ಸಿಪಿಐ ಕಪಿಲದೇವ, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಸುರೇಶ ದೇಶಪಾಂಡೆ, ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ತಾಲೂಕಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ನಾಗಶೆಟ್ಟಿ ಭದ್ರಶೆಟ್ಟಿ ಸ್ಬಾಗತಿಸಿದರು. ಅಶೋಕಕುಮಾರ ಕುಲಕರ್ಣಿ ವಂದಿಸಿದರು. ಅಶೋಕ ಹೂವಿನಭಾವಿ ನಿರೂಪಿಸಿದರು.

