ಅ.27 ಕ್ಕೆ ಗೋವಾದಲ್ಲಿ ನಾಲವಾರ ಶ್ರೀಗಳ ಷಷ್ಠ್ಯಬ್ದಿ ಸಮಾರಂಭ, ಮುಖ್ಯಮಂತ್ರಿಗಳಿಂದ ಗುರುವಂದನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಷಷ್ಠ್ಯಬ್ದಿ ಸಮಾರಂಭ ನೆರೆಯ ರಾಜ್ಯ ಗೋವಾ ರಾಜ್ಯದ ಬಿಚ್ಚೋಲಿಯಂನಲ್ಲಿ ಇದೇ ಅ. 27 ರಂದು ಬೆಳಗ್ಗೆ 10.30ಕ್ಕೆ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವಾರ್ ತಿಳಿಸಿದ್ದಾರೆ.
ಕರ್ಮಭೂಮಿ ಕನ್ನಡ ಸಂಘ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ವತಿಯಿಂದ ಬಿಚ್ಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ಹುಕ್ಕೇರಿ ಹಿರೇಮಠದ ಪೂಜ್ಯರ ಸಾನಿಧ್ಯದಲ್ಲಿ ನಡೆಯುವ ನಾಲವಾರ ಶ್ರೀಗಳ ಗುರುವಂದನೆ ಹಾಗೂ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಗೋವಾ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಉದ್ಘಾಟಿಸಿ, ಭಕ್ತರ ಪರವಾಗಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗೌರವಿಸಲಿದ್ದಾರೆ. ಭಾರತ ಸರಕಾರದ ಪವರ್ ಮಿನಿಸ್ಟರ್ ಶ್ರೀಪಾದ್ ನಾಯಕ್, ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ವಿವಿಧ ಸಚಿವರು ಶಾಸಕರು ಭಾಗವಹಿಸುವರು.
ಗೋವಾ ರಾಜ್ಯದಲ್ಲಿ ಕರ್ನಾಟಕ ರಾಜ್ಯದ ಹಲವಾರು ಭಾಗಗಳ ಸಾವಿರಾರು ಜನ ವಾಸಿಸುತ್ತಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಭಕ್ತರು ನಾಲವಾರ ಶ್ರೀಗಳ 60 ನೇ ಜನ್ಮದಿನದ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅನೇಕ ಜನ ಸಾಹಿತಿಗಳು, ಕಲಾವಿದರು ಭಾಗವಹಿಸುವ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಗುತ್ತಿದೆ. ಶ್ರೀಮಠದ ಸದ್ಭಕ್ತರಾದ ಮಹೇಶಬಾಬು ಸುರ್ವೆ, ಹನುಮಂತರೆಡ್ಡಿ ಶಿರೂರ್, ಎಲ್ ಕುಂದರಗಿ, ರವೀಂದ್ರ ತೊಟ್ಟಿಗೇರಿ, ಶ್ರೀ ಕ್ಷೇತ್ರ ನಾಲವಾರ ಶ್ರೀಮಠದ ಭಕ್ತ ಬಳಗ ಗೋವಾ ಅವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದ್ದು, ಗೋವಾ ಮತ್ತು ಕರ್ನಾಟಕ ರಾಜ್ಯದ ಹಲವು ಸಚಿವರು ಹಾಗೂ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ನಾಲವಾರ ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ್ ತಿಳಿಸಿದ್ದಾರೆ.