ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಶಿಫಾರಸ್ಸು ಕಳುಹಿಸಿ, ಸಂವಿಧಾನಬದ್ಧವಾದ ಸಾಮಾಜಿಕ ನ್ಯಾಯ, ಹಕ್ಕು ಒದಗಿಸುವಂತೆ ಮುಖಂಡರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅತೀ ಹಿಂದುಳಿದ ಸಮಾಜವಾಗಿರುವ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಶಿಫಾರಸ್ಸು ಪತ್ರ ಕಳುಹಿಸಿ ಸಮಾಜಕ್ಕೆ ಸಂವಿಧಾನಬದ್ಧವಾದ ಸಾಮಾಜಿಕ ನ್ಯಾಯ, ಹಕ್ಕು ಒದಗಿಸಿಕೊಡಬೇಕು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ ನೇತೃತ್ವದಲ್ಲಿ ಮುಖಂಡರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಜಾತಿಗಳಾಗಿವೆ. ಜನರು ಅತ್ಯಂತ ಕಡುಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. ಶ್ರಮಜೀವಿಗಳಾದ ಈ ಎಲ್ಲಾ ಜಾತಿಗಳ ಜನರು ಶ್ರಮಜೀವಿಗಳಾಗಿದ್ದಾರೆ. ಕೃಷಿ ಕಾರ್ಮಿಕರಾಗಿ, ಕೂಲಿಕಾರರಾಗಿ, ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಉದ್ಯೋಗ ಖಾತರಿ ಕಾರ್ಮಿಕರಾಗಿ, ಮೀನು ಹಿಡಿಯುವ, ದೋಣಿ ನಡೆಸುವ ಕಾಯಕ ಮಾಡಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಜಾತಿಗಳು ಪ್ರವರ್ಗ-1 ರಲ್ಲಿವೆ. ಕಳೆದ 11 ಏಪ್ರಿಲ್ 2002 ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ ರಾಜ್ಯಪತ್ರದ ಪ್ರಕಾರ ಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 6(ಎ) ಬೆಸ್ತ, ಮತ್ತು ಬೆಸ್ತ ಜಾತಿಯ ಉಪ ಜಾತಿಗಳಾದ ಕಬ್ಬಲಿಗ (ವಿ), ಕೋಲಿ ಕೋಳಿ (ಝಡ್), ಅಂಬಿಗ (ಬಿ) ಜಾತಿಗಳು ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿಯ ಪ್ರಕಾರ ಪ್ರವರ್ಗ-1 -ರಲ್ಲಿವೆ, ನೂರಾರು ಜಾತಿಗಳ ಪಟ್ಟಿಯಲ್ಲಿ ಈ ಜಾತಿಗಳಿವೆ. ಸರ್ಕಾರದ ಜಾತಿ ಪಟ್ಟಿಯ ಪ್ರಕಾರ ಸರ್ಕಾರದ ಮೀಸಲಾತಿಯೂ ನಾಲ್ಕು ಜಾತಿಗಳಿಗೆ ಕೇವಲ ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನಬದ್ಧವಾಗಿ, ಈಗಿರುವ ಮೀಸಲಾತಿ ಪ್ರಕಾರ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕಲಬುರಗಿ, ಬೀದರ, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಯ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲಾ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವುದು ಅತ್ಯಂತ ಅವಶ್ಯಕವಾಗಿದೆ. ಆ ಮೂಲಕ ಜನರು ಸಮಗ್ರವಾಗಿ ಅಭಿವೃದ್ಧಿ ಹೊಂದಲು, ಸಮಾನತೆಯಿಂದ ಮತ್ತು ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ್ ಮಾತನಾಡಿ, ಕಳೆದ 1996 ರಲ್ಲಿ ಕೋಲಿ ಸಮಾಜದ ಹೋರಾಟಗಾರ ದಿ.ವಿಠಲ್ ಹೇರೂರ ಅವರ ನೇತೃತ್ವದಲ್ಲಿ ಹೋರಾಟದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಕಳೆದ 2014 ರಲ್ಲಿ ರಾಜ್ಯ ಸರ್ಕಾರವು ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಸೂಕ್ತ ದಾಖಲೆಗಳು ಇಲ್ಲ ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯ 2017 ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಮತ್ತೆ 2021ರಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ವಿವರಗಳೊಂದಿಗೆ ಕೇಂದ್ರಕ್ಕೆ ಪತ್ರ ಬರೆದು ಮರುಪರಿಶೀಲನೆಗೆ ಒತ್ತಾಯಿಸಿತ್ತು. ಸಮಾಜದ ಕೋರಿಕೆಯನ್ನು ಆರ್.ಜಿ.ಐ ತಿರಸ್ಕರಿಸಿದೆ ಎಂದು ಕೇಂದ್ರ ಸರ್ಕಾರ 2017 ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದೆ. ಮತ್ತೆ 2018 ರಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ. ಮಾಹಿತಿ, ಸೂಕ್ತ ದಾಖಲೆಗಳೊಂದಿಗೆ ಕೇಂದ್ರಕ್ಕೆ ಪತ್ರ ಬರೆದು ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಿದೆ. ಕ್ರಿ.ಶ 1881 ರಿಂದ 1930 ರವರೆಗೆ ಬ್ರಿಟಿಷ್ ಭಾರತ ಸರ್ಕಾರ ಭಾರತದಲ್ಲಿ ಕೈಗೊಂಡಿರುವ ಜನಗಣತಿಗಳಲ್ಲಿ ಉಲ್ಲೇಖಿಸಿರುವ ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ ಜಾತಿಗಳು ಬುಡಕಟ್ಟು ಜನಾಂಗದ ಗುಣಲಕ್ಷಣಗಳು ಹೊಂದಿವೆ ಎಂಬ ಉಲ್ಲೇಖದೊಂದಿಗೆ 2020 ರಲ್ಲಿ ರಾಜ್ಯ ಸರ್ಕಾರ ಮತ್ತೆ ದಾಖಲೆಗಳೊಂದಿಗೆ ಕೇಂದ್ರಕ್ಕೆ ಪತ್ರ ಬರೆದಿದೆ. ಕಳೆದ ನಾಲ್ಕು ದಶಕಗಳಿಂದ ನಿರಂತರ ಹೋರಾಟ, ಪ್ರತಿಭಟನೆ, ಮನವಿ ಸಲ್ಲಿಕೆ ಮಾಡುತ್ತಾ ಬಂದರೂ ಸಹ ಇಲ್ಲಿಯವರೆಗೆ ಕೋಲಿ ಸಮಾಜದ ಬೇಡಿಕೆ ಈಡೇರಿಕೆಯಾಗಿಲ್ಲ ಎಂದು ನೋವಿನಿಂದ ಹೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ನಡೆಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯಲ್ಲಿ ಉಲ್ಲೇಖವಾಗಿರುವ ಬೆಸ್ತ್ರ, ಕೋಲಿ, ಕಬ್ಬಲಿಗ, ಅಂಬಿಗ ಜಾತಿಗಳ ಬುಡಕಟ್ಟು ಲಕ್ಷಣಗಳ ಅಂಶಗಳನ್ನು ಗುರುತಿಸಿ ಪ್ರತ್ಯೇಕ ಉಲ್ಲೇಖದೊಂದಿಗೆ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಗಳು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಹೊಸದಾಗಿ ಪ್ರಸ್ತಾವನೆಯೊಂದಿಗೆ ಶೀಫಾರಸ್ಸು ಮಾಡಬೇಕು. ಅಗತ್ಯವಾದರೆ ಸೂಕ್ತ ಅನುದಾನ ನೀಡುವ ಮೂಲಕ ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಹೊಸದಾಗಿ ಮಾಡಿಸಿ ವರದಿಯೊಂದಿಗೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಮನವಿ ಮಾಡಿದ್ದಾರೆ.
ಹಿಂದುಳಿದ ಜಾತಿಗಳ ಸ್ಥಿತಿಗತಿಯ ಸಂಪೂರ್ಣ ಇತಿಹಾಸ, ಮಾಹಿತಿ ಹೊಂದಿರುವ ತಾವು ದಯಮಾಡಿ ಹಿಂದುಳಿದ ಜಾತಿಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಮುಂದಾಗಬೇಕು. ನಾಲ್ಕು ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಈ ಹಿಂದಿನಂತೆ ಯಾವುದೇ ರೀತಿಯ ಲೋಪದೋಷವಾಗದಂತೆ ಕೇಂದ್ರ ಬುಡಕಟ್ಟು ಸಚಿವಾಲಯದ ನಿಯಮಗಳಂತೆ, ಭಾರತ ಸರ್ಕಾರದ ಆರ್.ಜಿ.ಐ ನಿಯಮಗಳಂತೆ ಅವಶ್ಯಕವಾದ ಸಮಗ್ರ ವಿವರಣೆಯುಳ್ಳ ಮಾಹಿತಿ, ಸೂಕ್ತ ದಾಖಲೆಗಳು ಹಾಗೂ ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಸಂಪೂರ್ಣ ಹೊಸದಾಗಿ ಕೇಂದ್ರ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸುವ ಮೂಲಕ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೋಲಿ ಸಮಾಜದ ನಗರಾಧ್ಯಕ್ಷ ಪ್ರಭು ಹಲಕರ್ಟಿ, ತಾಲೂಕು ಯುವ ಅಧ್ಯಕ್ಷರಾದ ರಾಜೇಶ ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ನಗರ ಯುವ ಅಧ್ಯಕ್ಷ ಬಸವರಾಜ ಮೈನಾಳಕರ್, ಮುಖಂಡರಾದ ಬಸವರಾಜ ಚೆನ್ನಮಳ್ಳಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರು, ದೇವಿಂದ ಅರಣಕಲ್, ಮುನಿಯಪ್ಪ ಕೊಳ್ಳಿ, ಮಲ್ಲಿಕಾರ್ಜುನ ಸಂಗಾವಿ, ಭೀಮಣ್ಣಾ ಹೊತಿನಮಡಿ, ಬಸಣ್ಣ ತಳವಾರ, ಸಾಬಣ್ಣ ಹೋಳಿಕಟ್ಟಿ, ವೆಂಕಟರಮಣ ಬೇವಿನಗಿಡ, ರಾಜು ಮುದ್ನಾಳ, ದುರ್ಜಿನ್ ನಾಟೀಕಾರ, ಶಿವಣ್ಣ ದೊಡ್ಡಮನಿ, ಅಂಬು ಹೊಳಿಕಟ್ಟಿ, ಮಹಾದೇವ ಬೂನಿ, ಶಿವರಾಯ ಹೊಸಮನಿ, ಬಸವರಾಜ ಬಾನರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

