ಕೋಳಿ ಎಸೆದು ಹರಕೆ ತೀರಿಸಿದ ಭಕ್ತರು | ಚಿತ್ತಾಪುರ ಮರಗಮ್ಮ ದೇವಿ ಜಾತ್ರೆಗೆ ಹರಿದುಬಂದ ಭಕ್ತಸಾಗರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಾವಿರಾರು ಭಕ್ತ ಸಾಗರದ ಮದ್ಯೆ ಪಟ್ಟಣದ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಶ್ರದ್ಧೆ ಮತ್ತು ಭಕ್ತಿಯಿಂದ ಸಂಜೆ ಬಹಳ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಹೋಳಿಕಟ್ಟಾದ ದೇಶಮುಖ ಹಾಗೂ ರೇಷ್ಮೆ ಮನೆಯಿಂದ ದೇವಿಯ ಗೊಂಬೆಗಳಿಗೆ ಬಟ್ಟೆ ತರುವುದು, ಮುಕುಂದ ಬಡಿಗೇರ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂಬೆಗಳ ಪೂಜೆ ಕಾರ್ಯ ನೆರವೇರಿತ್ತು. ಇಲ್ಲಿ ಮಹಿಳೆಯರು, ಸಾರ್ವಜನಿಕರು ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯಿಂದ ಪ್ರಾರಂಭವಾದ ಮೆರವಣಿಗೆ ಹನುಮಾನ ಮಂದಿರ ರಸ್ತೆ, ಶಿಶು ವಿಹಾರ ಶಾಲೆಯ ರಸ್ತೆ ಮೂಲಕ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆ ಉದ್ದಕ್ಕೂ ಭಕ್ತರು ನೂರಾರು ಕೋಳಿಗಳು ಎಸೆಯುವುದೇ ನೋಡುಗರ ಕಣಮನ ಸೆಳೆಯುತ್ತದೆ.
ಜಾತ್ರೆಯಲ್ಲಿ ಎಲ್ಲ ಜಾತಿ ಜನಾಂಗ, ಧರ್ಮದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಅರ್ಪಿಸಿ ಪುನೀತರಾದರು.
ಮಂಗಳವಾರ ಸಾಯಂಕಾಲ 6 ಘಂಟೆಗೆ ಮರಗಮ್ಮ ದೇವಿಯ ಗೊಂಬೆಗಳ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ತಮ್ಮ ಮನದಾಳದ ಬೇಡಿಕೆಗಳನ್ನು ಇಡೇರಿಕೆಗಾಗಿ ಇಲ್ಲಿಯ ಭಕ್ತರು ಕೋಳಿ ಕೊಡುವ ಹರಕೆ ಮಾಡಿಕೊಳ್ಳುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದು ಬಂದ ನಂಬಿಕೆ ಮತ್ತು ಸಂಪ್ರದಾಯವಾಗಿದೆ.
ಗೊಂಬೆಗಳ ಮೇಲೆ ಕೋಳಿ ಎಸೆದಾಗ ಅದನ್ನು ಹಿಡಿಯಲು ನಾ ಮುಂದು ತಾ ಮುಂದು ಎಂದು ಯುವಕರು ಮುಗಿಬಿಳುತ್ತಾರೆ. ಒಬ್ಬರ ಕೈಗೆ ಸಿಕ್ಕರೆ ಕೋಳಿ ಉಳಿದಿತ್ತು. ಅದೇ ಕೋಳಿ ಇಬ್ಬರ ಅಥವಾ ಮೂವರ ನಡುವೆ ಸಿಕ್ಕಾಗ ಕೋಳಿಯ ದೇಹ ಚಿದ್ರ ಚಿದ್ರವಾಗುತ್ತದೆ. ಈ ದೃಶ್ಯ ನೋಡುಗರಿಗೆ ನೋವನ್ನು ಉಂಟುಮಾಡುತ್ತದೆ. ಆದರೂ ಭಕ್ತಾದಿಗಳು ಹರಕೆ ತೀರಿಸಿ ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ.
ಮಹಿಳೆಯರು, ರಾಜಕೀಯ ಮುಖಂಡರು, ಅಧಿಕಾರಿಗಳು, ಯುವಕರು ಹೀಗೆ ಎಲ್ಲರು ಶದ್ದಾ ಭಕ್ತಿ ಭಾವನೆಯಿಂದ ಭಾಗಹಿಸುತ್ತಾರೆ. ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರೂ ಸಹ ಯಾವುದೇ ಜಗಳ, ಅನಾಹುತಗಳು ಆಗದೆ ಇರುವುದು ಮತ್ತೊಂದು ಇಲ್ಲಿನ ವಿಶೇಷ, ಪಟ್ಟಣದಲ್ಲಿ ಮರಗಮ್ಮ ದೇವಿ ಜಾತ್ರೆಗೆ ಸೇರುವಷ್ಟು ಜನ ಮತ್ತೇ ಯಾವುದೇ ಜಾತ್ರೆಗೆ ಅಷ್ಟು ಜನ ಸೇರುವುದಿಲ್ಲ ಎಂಬ ಅಭಿಪ್ರಾಯ ಇಲ್ಲಿಯ ಸಾರ್ವಜನಿಕರದ್ದಾಗಿದೆ. ಈ ವೇಳೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

