Oplus_0

ಚಿತ್ತಾಪುರ ತಾಲೂಕು ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಮಿತಿಯ ಸಭೆ, ನೀರಿನ ಸಮಸ್ಯೆಗೆ ಸ್ಪಂದಿಸಿ ಕೈಗೊಂಡ ಕ್ರಮದ ಬಗ್ಗೆ ಉತ್ತರಿಸಲು ಹಲಕಟ್ಟಿ ಪಿಡಿಒ ಗೆ ತಹಸೀಲ್ದಾರ್ ತಾಕೀತು 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕುಡಿಯುವ ನೀರಿನ ಸಮಸ್ಯೆ ಹಾಗೂ ದೂರುಗಳಿಗಾಗಿ ಮಾಡಿದ ಗ್ರೂಪ್ ನಲ್ಲಿ ನೀರಿನ ಸಮಸ್ಯೆ ಬಗ್ಗೆ ಮೇಸೆಜ್ ಹಾಕಿದರೆ ಪ್ರತಿಕ್ರಿಯೆ ನೀಡಲ್ಲ ಇದು ಸರಿಯಲ್ಲ, ತಿದ್ದಿಕೊಳ್ಳಿ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ, ಗಂಟೆಗೊಮ್ಮೆ ಗ್ರೂಪ್ ನೋಡಬೇಕು, ಸಮಸ್ಯೆಗೆ ಸ್ಪಂದಿಸಿ ಕೈಗೊಂಡ ಕ್ರಮದ ಬಗ್ಗೆ ಉತ್ತರಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹಲಕಟ್ಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಾಕೀತು ಮಾಡಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಕೆಲಸಗಳಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ರಜೆ ಮೇಲೆ ಹೋಗಿದ್ದೇನೆ ಎಂದು ಹಾರಿಕೆ ಉತ್ತರ ನೀಡದೇ ದಿನದ 24 ಗಂಟೆ ಕಾಲ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯಾಗಲು ಅವಕಾಶ ನೀಡಬೇಡಿ, ಸಮಸ್ಯೆ ಕಂಡು ಬರುತ್ತಿದ್ದಂತೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಅಲ್ಲದೇ ನಮ್ಮ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಗೈರು ಹಾಜರಿದ್ದ ಗ್ರಾಮಾಡಳಿತ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು ತಹಸೀಲ್ದಾರ್ ಸೂಚಿಸಿದರು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ 9 ಹಳ್ಳಿಗಳನ್ನು ಗುರುತಿಸಿದ್ದು ಅದರಲ್ಲಿ ರಾಜೋಳ್ಳಾ ಮತ್ತು ಹಲಕಟ್ಟಿ ಗ್ರಾಮಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಚಿತ್ತಾಪುರ ತಾಲೂಕಿನ 2025-26ನೇ ಸಾಲಿನ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಕುರಿತು ಹಾಗೂ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಮಾತನಾಡಿ, ತಾಲೂಕಿನಲ್ಲಿ ದಿನೇ ದಿನೇ ಬೇಸಿಗೆ ಬಿಸಿಲು ಹೆಚ್ಚುತ್ತಿದೆ ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹೇಳಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಎಡಿ ಪಂಡಿತ್ ಸಿಂದೆ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಪಶು ಅಧಿಕಾರಿ ಡಾ.ಶಂಕರ ಕಣ್ಣಿ, ತೋಟಗಾರಿಕೆ ಅಧಿಕಾರಿ ಶಂಕರಗೌಡ ಪಾಟೀಲ, ಅರಣ್ಯಾಧಿಕಾರಿ ವಿಜಯಕುಮಾರ್ ಸೇರಿದಂತೆ ಕಂದಾಯ, ಜೇಸ್ಕಾಂ, ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!