ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಚುನಾವಣೆ ಜೂ.15 ಕ್ಕೆ, ನಾಮಪತ್ರಗಳು ಸಲ್ಲಿಸುವ ಪ್ರಕ್ರಿಯೆ ಜೋರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ಚಿತಾಪುರ (ಪಿಎಲ್’ಡಿ) ಚುನಾವಣೆ ಇದೇ ಜೂ.15 ನಿಗದಿಯಾಗಿದ್ದು ನಾಮಪತ್ರಗಳು ಸಲ್ಲಿಸುವ ಪ್ರಕ್ರಿಯೆ ಜೋರಾಗಿ ನಡೆದಿದೆ.
ಗುಂಡಗುರ್ತಿ ಕ್ಷೇತ್ರದಿಂದ ಸುನೀಲ್ ದೊಡ್ಡಮನಿ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ತಾಪಂ ಮಾಜಿ ಸದಸ್ಯ ಬಸವರಾಜ ಹೊಸಳ್ಳಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ್ ಯಾಗಾಪೂರ, ಮುಖಂಡರಾದ ಯಲ್ಲಾಲಿಂಗ ಮುಗುಟಿ, ಶರಣು ಭಾಗೋಡಿ, ಪೀರಪ್ಪ ದೊಡ್ಡಮನಿ, ರತನ್ ಕನ್ನಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜೂ.1 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಜೂ. 9 ರಂದು ಪರಿಶೀಲನೆ, ಜೂ.10 ರಂದು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇದಾದ ಬಳಿಕ ಜೂ. 15 ರಂದು ಮತದಾನ ನಡೆಯಲಿದೆ. ಅಂದೇ ಫಲಿತಾಂಶವೂ ಹೊರಬೀಳಲಿದೆ.
ಒಟ್ಟು 14 ಮತಕ್ಷೇತ್ರಗಳಲ್ಲಿ, ಕಂದಗೋಳ, ಹೆಬ್ಬಾಳ, ಕೊಡದೂರ, ಚಿತ್ತಾಪುರ, ವಾಡಿ, ಭಂಕೂರ, ಅಳ್ಳೊಳ್ಳಿ (ಸಾಮಾನ್ಯ), ಶಹಾಬಾದ್, ನಾಲವಾರ (ಮಹಿಳಾ), ಕಾಳಗಿ (ಹಿಂದುಳಿದ ವರ್ಗ-ಬ), ಭೀಮನಳ್ಳಿ (ಹಿಂದುಳಿದ ವರ್ಗ-ಅ), ಗುಂಡಗುರ್ತಿ (ಪರಿಶಿಷ್ಟ ಜಾತಿ), ಕಮರವಾಡಿ (ಪರಿಶಿಷ್ಟ ಪಂಗಡ) ಕ್ಷೇತ್ರಗಳನ್ನು ಮೀಸಲಿಡಲಾಗಿದೆ.

