ಕೊತ್ತಲಾಪುರ ಯಲ್ಲಮ್ಮ ದೇವಿಯ ಮೂರ್ತಿಯ ಭಗ್ನಗೊಳಿಸಿ ಹಿಂದುಗಳ ಭಾವನೆಗೆ ದಕ್ಕೆ ತಂದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ವಿಎಚ್’ಪಿ, ಬಜರಂಗದಳ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಹರಪೇಟ್ ಏರಿಯಾದ ಕೊತ್ತಲಾಪುರ ಶ್ರೀ ಯಲ್ಲಮ್ಮ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ತುಂಡರಿಸಿ ಕಳುವು ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳದ ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಿದ ಮುಖಂಡರು ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಅವರಿಗೆ ಸಲ್ಲಿಸಿದರು.
ವಿಭಾಗದ ಕಾರ್ಯದರ್ಶಿ ಅಂಬರೀಷ್ ಸುಲೇಗಾಂವ ಮಾತನಾಡಿ, ಚಿತ್ತಾಪುರದಲ್ಲಿ ಇತ್ತೀಚೆಗೆ ಅಂಗಡಿಗಳು, ಮನೆಗಳು ಕಳ್ಳತನವಾಗಿವೆ ಈಗ ದೇವಸ್ಥಾನ ಕಳ್ಳತನವಾಗಿದೆ ಇಷ್ಟಾದರೂ ಪೊಲೀಸರು ಯಾವ ಕಳ್ಳತನ ಪ್ರಕರಣ ಭೇದಿಸಿಲ್ಲ, ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದ ಕಳ್ಳತನ ಆಗಿರುವುದು ಖಂಡನಾರ್ಹ. ಹೀಗಾಗಿ ಪಟ್ಟಣದ ಕೊತ್ತಲಾಪೂರ ಯಲ್ಲಮ್ಮ ದೇವಸ್ಥಾನ, ನಾಗಾವಿ ಯಲ್ಲಮ್ಮ, ಜಗದಂಭ ದೇವಸ್ಥಾನ ಸೇರಿದಂತೆ ನವರಾತ್ರಿ ಆಚರಣೆ ಮಾಡುವ ಎಲ್ಲಾ ದೇವಸ್ಥಾನಗಳಿಗೆ ಸಿಸಿ ಕ್ಯಾಮೆರಾ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿದರು.
ಈಚೇಗೆ ಅಕ್ರಮ ಗೋಸಾಗಾಟ ಬಗ್ಗೆ ಮಾಹಿತಿ ನೀಡಿದವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಅಲ್ಲದೇ ಅಕ್ರಮ ಗೋವುಗಳ ಸಾಗಣೆ ಮಾಡುವವರು ಹಾಗೂ ಪೊಲೀಸ್ ಇಲಾಖೆಯ ಮೇಲೆ ಕಲ್ಲು ತೂರಾಟ ಮಾಡಿದವರ ಪ್ರಕರಣ ಸರ್ಕಾರ ಹಿಂಪಡೆದಿದೆ ಇದು ಪೊಲೀಸರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನ್ಯಾಯವಾದಿ ಅಶ್ವಥ್ ರಾಠೋಡ ಮಾತನಾಡಿ, ಚಿತ್ತಾಪುರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಆದರೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಕೊತ್ತಲಾಪುರ ಶ್ರೀ ಯಲ್ಲಮ್ಮದೇವಿಯ ಬೆಳ್ಳಿ ಮೂರ್ತಿಯನ್ನು ಭಗ್ನಗೊಳಿಸಿ ಬೆಳ್ಳಿ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ ಪ್ರಕರಣ ದೇವಿಯ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ದೇವಿಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಒಂದು ವಾರದಲ್ಲಿ ಬಂಧಿಸಬೇಕು ಇಲ್ಲದಿದ್ದರೆ ವಿಶ್ವ ಹಿಂದು ಪರಿಷದ್, ಬಜರಂಗದಳದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಎಚ್’ಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಪುರಸಭೆ ಸದಸ್ಯ ರಮೇಶ್ ಬೊಮ್ಮನಳ್ಳಿ, ವಿಶ್ವ ಹಿಂದೂ ಪರಿಷದ್, ಬಜರಂಗದಳದ ಮುಖಂಡರಾದ ಮಹಾದೇವ ಅಂಗಡಿ, ಅಜಯ್ ಬಿದರಿ, ಮಲ್ಲಿಕಾರ್ಜುನ ಉಪ್ಪಾರ, ಸಾಬಣ್ಣ ಪೂಜಾರಿ, ಬಸವರಾಜ ಕುಂಬಾರ, ಸುನೀಲ್ ರಾಠೋಡ, ಯಲ್ಲಪ್ಪ ಪುಂಗಿ, ಯಲ್ಲಾಲಿಂಗ ಸುಲ್ತಾನಪೂರ, ಮಂಜುನಾಥ ಜೀರ್, ಅಂಬರೀಷ್ ಕಲ್ಲಶೆಟ್ಟಿ, ಹಣಮಂತ ದಂಡೋತಿ, ಅನೀಲ್ ಚವ್ಹಾಣ, ನೂರಂದಪ್ಪ ಸಿಂಪಿ, ಸಂತೋಷ ಗಂಜಿ, ಮಲ್ಲಿಕಾರ್ಜುನ ಪೋಲಕಪಳ್ಳಿ ಸೇರಿದಂತೆ ಇತರರು ಇದ್ದರು.

