ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಗೂ ಅವಾಚ್ಯವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ಚಿತ್ತಾಪುರ ಬಂದ್ ಸಂಪೂರ್ಣ ಯಶಸ್ವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯವಾಗಿ ಹಾಗೂ ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ಚಿತ್ತಾಪುರ-ವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಕರೆ ನೀಡಿದ ಚಿತ್ತಾಪುರ ಬಂದ್ ಪ್ರತಿಭಟನೆ ಸಂಪೂರ್ಣ ಯಶಸ್ವಿಗೊಂಡಿದೆ.
ವ್ಯಾಪಾರ ವಹಿವಾಟು ಸ್ತಗಿತ, ಚಿತ್ತಾಪುರ ಸ್ತಬ್ಧ:
ಬುಧವಾರವೇ ಎಲ್ಲಾ ವ್ಯಾಪಾರಿಗಳಿಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಚಿತ್ತಾಪುರ ಬಂದ್ ಗೆ ಸಹಕರಿಸಿ ಎಂದು ಮನವಿ ಮಾಡಿದ್ದರಿಂದ ಗುರುವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಸಹಕರಿಸಿದರು, ಇದರಿಂದ ಚಿತ್ತಾಪುರ ಸ್ತಬ್ಧವಾಗಿತ್ತು. ಶಾಲಾಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು, ಮೇಡಿಕಲ್ ಹೊರತುಪಡಿಸಿ ಎಲ್ಲಾ ಪ್ರಕಾರದ ವ್ಯಾಪಾರ ವಹಿವಾಟು ಸ್ತಗಿತಗೊಂಡಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಬಸ್ಸುಗಳೂ ಸಹ ರಸ್ತೆಗೆ ಇಳಿಯಲಿಲ್ಲ ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಳ್ಳಂ ಬೆಳಿಗ್ಗೆಯೇ ಕಾಂಗ್ರೆಸ್ ಯುವ ಕಾರ್ಯಕರ್ತರು ಲಾಡ್ಜಿಂಗ್ ಕ್ರಾಸ್ ಹತ್ತಿರ ಜಮಾವಣೆಗೊಂಡು ಮಾನವ ಸರಪಳಿ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಬೃಹತ್ ಪ್ರತಿಭಟನೆ ಮೆರವಣಿಗೆ:
ಪಟ್ಟಣದ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನೆ ಮೆರವಣಿಗೆ, ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕ್ರಾಸ್ ಹತ್ತಿರ ಸಮಾವೇಶಗೊಂಡಿತ್ತು. ಪ್ರತಿಭಟನೆಯಲ್ಲಿ ಬ್ಯಾನ್ ಬ್ಯಾನ್ ಆರ್.ಎಸ್.ಎಸ್ ಬ್ಯಾನ್, ಪ್ರಿಯಾಂಕ್ ಖರ್ಗೆ ಅವರಿಗೆ ಜಯವಾಗಲಿ ಎನ್ನುವ ಜಯಘೋಷಗಳು ಮೊಳಗಿದವು.
ತಹಸೀಲ್ದಾರ್ ಅವರಿಗೆ ಮನವಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಮತ್ತು ಐ.ಟಿ.ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಶಾಲಾಕಾಲೇಜುಗಳು ಹಾಗೂ ಸರ್ಕಾರಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಕಾರ್ಯಚಟುವಟಿಕೆಗಳಿಗೆ ನಿಷೇಧಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕಾರಣ ಆರ್.ಎಸ್.ಎಸ್ ಸಂಘಟನೆ ಹಾಗೂ ಬಿ.ಜೆ.ಪಿ ಕಡೆಯಿಂದ ಸಚಿವರಿಗೆ ಹಾಗೂ ಅವರ ಕುಟುಂಬದವರಿಗೆ ವೈಯಕ್ತಿಕ ನಿಂದನೆ ಹಾಗೂ ಜೀವ ಬೆದರಿಕೆ ಹಾಕುತ್ತಿರುವರರನ್ನು ಪತ್ತೆ ಹಚ್ಚಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಚಿವರ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಮುಖಂಡರು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತ ಸಾಬಣ್ಣ ಭರಾಟೆ:
ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕಾರ್ಯಕರ್ತನೊಬ್ಬ ವಿಷ ಕುಡಿಯಲು ಯತ್ನಿಸಿದ ಘಟನೆ ಲಾಡ್ಜಿಂಗ್ ಕ್ರಾಸ್ ಹತ್ತಿರ ನಡೆದಿದೆ. ತಾಲೂಕಿನ ದಂಡೋತಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಾಬಣ್ಣ ಭರಾಟೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ, ಈ ವೇಳೆ ಅಕ್ಕಪಕ್ಕದಲ್ಲಿ ಇದ್ದ ಕಾಂಗ್ರೆಸ್ ಮುಖಂಡರು ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಸಾಬಣ್ಣ ಭರಾಟೆ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಅಧ್ಯಕ್ಷ ಮಹಿಮೂದ್ ಸಾಹೇಬ್, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ತಾಪಂ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಸಗರ, ಶರಣಬಸಪ್ಪ ಪಾಟೀಲ, ರಮೇಶ್ ಕವಡೆ ಅವರು ಮಾತನಾಡಿದರು.
ಕಾಂಗ್ರೆಸ್ ಪ್ರಮುಖರಾದ ಶಿವರುದ್ರಪ್ಪ ಬೀಣ್ಣಿ, ಅಜೀಜ್ ಸೇಟ್, ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಶಿವಕಾಂತ ಬೆಣ್ಣೂರಕರ್, ಜಯಪ್ರಕಾಶ್ ಕಮಕನೂರ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಶಾಂತಣ್ಣ ಚಾಳೀಕಾರ, ನಾಮದೇವ ರಾಠೋಡ, ಬಸವರಾಜ ಪೂಜಾರಿ, ರಾಮಲಿಂಗ ಬಾನರ್, ಸಾಯಬಣ್ಣ ಕಾಶಿ, ನಾಗರೆಡ್ಡಿ ಗೋಪಸೇನ್, ವೀರುಪಾಕ್ಷಪ್ಪ ಗಡ್ಡದ್, ಸುನೀಲ್ ದೊಡ್ಡಮನಿ, ಜಗಣ್ಣಗೌಡ ರಾಮತೀರ್ಥ, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗದೀಶ್ ಚವ್ಹಾಣ, ಶರಣಪ್ಪ ನಾಟೀಕಾರ, ನಾಗಯ್ಯ ಗುತ್ತೇದಾರ ಕರದಾಳ, ಪಾಶಾಮಿಯ್ಯಾ ಖುರೇಷಿ, ಭೀಮಸಿಂಗ ಚವ್ಹಾಣ, ನಿಂಗಣ್ಣ ಹೆಗಲೇರಿ, ಹಣಮಂತ ಸಂಕನೂರ, ದೇವು ಯಾಬಾಳ, ಮನ್ಸೂರ್ ಪಟೇಲ್, ಶಿವರಾಜ್ ಕಲಗುರ್ತಿ, ಮಹೇಶ್ ಕಾಶಿ, ಶರಣು ವಾರದ್, ಶರಣಪ್ಪ ನಾಶಿ, ಈರಪ್ಪ ಭೋವಿ, ಸಪ್ನಾ ಪಾಟೀಲ, ಇಬ್ರಾಹಿಂ ಪಟೇಲ್, ಶರಣು ನಾಟೀಕಾರ, ಸಂಜಯ ಬುಳಕರ್, ಉದಯಕುಮಾರ್ ಸಾಗರ, ಬಸವರಾಜ ಹೊಸಳ್ಳಿ, ಶಿವುಕುಮಾರ ಯಾಗಾಪೂರ, ಯಲ್ಲಾಲಿಂಗ ಪೂಜಾರಿ, ಕಾಶಪ್ಪ ಡೋಣಗಾಂವ, ಮಲ್ಲಿಕಾರ್ಜುನ ಮುಡಬೂಳಕರ್, ರಾಜಣ್ಣ ಕರದಾಳ, ಜಗನ್ನಾಥ ಮುಡಬೂಳಕರ್, ವಿಠಲ್ ಕಟ್ಟಿಮನಿ, ಸುರೇಶ್ ಗುತ್ತೇದಾರ, ಪ್ರಭು ಹಲಕಟ್ಟಿ, ನಜೀರ್ ಆಡಕಿ, ಶರಣು ಡೋಣಗಾಂವ, ಮಾರುತಿ ಹುಳಗೋಳ, ರವಿಸಾಗರ ಹೊಸಮನಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ಪಿಎಸ್ಐ ತಿರುಮಲೇಶ್ ಕುಂಬಾರ, ತಿಮ್ಮಯ್ಯ ಕಾಳಗಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

