ಚಿತ್ತಾಪುರ ಪುರಸಭೆ ಅಧಿಕಾರಾವಧಿ ಮುಕ್ತಾಯ, ಆಡಳಿತಾಧಿಕಾರಿ ನೇಮಕ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-389 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವಧಿ ಮುಕ್ತಾಯಗೊಂಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಅವುಗಳ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಹಿತದೃಷ್ಟಿಯಿಂದ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ.
ಚಿತ್ತಾಪುರ ಪುರಸಭೆ ಚುನಾವಣೆ 3 ಸೆಪ್ಟೆಂಬರ್ 2018 ರಲ್ಲಿ ನಡೆದಿತ್ತು, ಆದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಕೋರ್ಟ್ ತಡೆಯಾಜ್ನೆ ಕಾರಣ 2 ವರ್ಷಗಳ ನಂತರ ಅಂದರೆ 9 ಅಕ್ಟೋಬರ್ 2020 ರಲ್ಲಿ ಚುನಾವಣೆ ನಡೆದು ಮೊದಲ ಅವಧಿಯಲ್ಲಿ ಅಧಿಕಾರದ ಹಂಚಿಕೆಯಿಂದ ಮೊದಲು 15 ತಿಂಗಳ ಅವಧಿಗೆ ಚಂದ್ರಶೇಖರ ಕಾಶಿ ಹಾಗೂ ಇನ್ನೂಳಿದ ಅರ್ಧ ಅವಧಿಗೆ ಮಲ್ಲಿಕಾರ್ಜುನ ಕಾಳಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಕುರಿತು ಪುರಸಭೆ ಸದಸ್ಯ ವಿನೋದ ಗುತ್ತೇದಾರ ಕೋರ್ಟ್ ಸ್ಟೇ ತಂದಿದ್ದರು. ಹೀಗಾಗಿ ಇಲ್ಲಿ ಆರು ತಿಂಗಳ ನಂತರ ಕೋರ್ಟ್ ತಡೆಯಾಜ್ಞೆ ತೆರುವುಗೊಂಡು ಕಳೆದ ಫೆಬ್ರವರಿ 28 ರಂದು ಚುನಾವಣೆ ನಡೆದಿದ್ದು ನವೆಂಬರ್ 9 ಕ್ಕೆ ಮುಕ್ತಾಯಗೊಂಡಿದೆ. ಮೀಸಲಾತಿ ಗೊಂದಲ ಕೋರ್ಟ್ ಸ್ಟೇಯಿಂದ, ಅವಧಿಗೂ ಮೀರಿ ಆಡಳಿತಾಧಿಕಾರಿ ನೇಮಕದಿಂದ ಅಧಿಕಾರದ ಅವಧಿ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ ಇದರಿಂದ ಸದಸ್ಯರು ಅಧಿಕಾರದಿಂದ ವಂಚಿತರಾಗುತ್ತಿದ್ದಾರೆ ಹೀಗಾಗಿ ಕೊರತೆಯಿದ್ದ 18 ತಿಂಗಳ ಅವಧಿ ನೀಡಬೇಕು ಎಂದು ಪುರಸಭೆ ಸದಸ್ಯರು ಕೋರ್ಟ್ ಮೋರೆ ಹೋಗಿದ್ದರು ಈ ಕುರಿತು ಮೂರು ಬಾರಿ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ಅವಧಿ ಮುಕ್ತಾಯಗೊಂಡ ಹಿನ್ನೆಲೆ ನವೆಂಬರ್ 10 ರಿಂದಲೇ ಜಾರಿ ಬರುವಂತೆ ಪುರಸಭೆಗೆ ಸೇಡಂ ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.

