ಸರ್ಕಾರಕ್ಕೆ ಹತ್ತು ಸಾವಿರ ಸಹಿ ಹಸ್ತಾಂತರ | ವಾಡಿ ಅಭಿವೃದ್ಧಿ ನಿರ್ಲಕ್ಷ್ಯ ಖಂಡಿಸಿ ಜನಧ್ವನಿ ಜಾಗೃತ ಸಮಿತಿಯಿಂದ ಪ್ರತಿಭಟನಾ ಧರಣಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಅಭಿವೃದ್ಧಿ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ನೂರಾರು ಜನ ಕಾರ್ಯಕರ್ತರು ವಾಡಿ ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಪದವಿಪೂರ್ವ, ಪದವಿ ಮಹಾವಿದ್ಯಾಲಯ, ಸಾರ್ವಜನಿಕ ಗ್ರಂಥಾಲಯ, ಸುಲಭ ಶೌಚಾಲಯ, ಮೂತ್ರಾಲಯ, ಬೀದಿ ದೀಪಗಳ ಸೌಲಭ್ಯ ನೀಡದೆ ಸರ್ಕಾರ ವಂಚಿಸಿದೆ ಎಂದು ಗಂಭೀರ ಆರೋಪ ಮಾಡಿದರು. ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರುಮಠ, ಮಹ್ಮದ್ ಇಸ್ಯೂಫ್ ಸಾಬ್ ಮುಲ್ಲಾ ಕಮರವಾಡಿ, ಜನರಿಂದ ತೆರಿಗೆ ಪಡೆಯುವ ಅಧಿಕಾರಿಗಳು ಜನರಿಗೆ ನೀಡಬೇಕಾದ ಸೌಕರ್ಯಗಳನ್ನು ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಹದಿಮೂರು ಪ್ರೌಢ ಶಾಲೆಗಳಿವೆ, ಸರ್ಕಾರ ಕಾಲೇಜು ಮಂಜೂರು ಮಾಡಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣದ ಕನಸು ಕಮರುತ್ತಿದೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ, ಕೇಂದ್ರ ಬಸ್ ನಿಲ್ದಾಣ ಸ್ಥಾಪನೆ ಮಾಡಿಲ್ಲ. ಸಾಹಿತ್ಯಾಸಕ್ತರಿಗೆ ಕೊರತೆಯಿಲ್ಲ, ಆದರೆ ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಕೊಟ್ಟಿಲ್ಲ. ಹೊರಗಿನಿಂದ ಪಟ್ಟಣಕ್ಕೆ ಬರುವವರಿಗೆ ಶುಲಭ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರ ನೈಸರ್ಗಿಕ ಕ್ರಿಯೆಯ ಪರಿಸ್ಥಿತಿ ಗಂಭೀರವಾಗಿದೆ. ಪುರಸಭೆ ಆಡಳಿತ ಕೇಂದ್ರ ಸ್ಥಾನದಲ್ಲಿ ಒಂದೂ ಸಾರ್ವಜನಿಕ ಮೂತ್ರಾಲಯಗಳಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿರಂತರವಾಗಿ ಹೋರಾಟಗಳನ್ನು ಮಾಡಲಾಗುತ್ತಿದ್ದರೂ ಕಿವುಡ ಸರ್ಕಾರಕ್ಕೆ ಜನಗಳ ಕೂಗು ಕೇಳಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಹಾಗೂ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಗೊಳ್ಳದಿದ್ದರೆ ರಸ್ತೆ ತಡೆ ಮತ್ತು ವಾಡಿ ಬಂದ್ ನಂತಹ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಜನಧ್ವನಿ ಜಾಗೃತ ಸಮಿತಿಯ ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ್, ಮುಖಂಡರಾದ ಜಯದೇವ ಜೋಗಿಕಲ್ ಮಠ, ದೇವಿಂದ್ರ ದೊಡ್ಡಮನಿ, ಭೀಮಸಿಂಗ್ ಚವ್ಹಾಣ, ಈರಣ್ಣ ಯಲಗಟ್ಟಿ, ಲಕ್ಷ್ಮೀ ಕುಲಕರ್ಣಿ, ವಿಜಯಲಕ್ಷ್ಮೀ, ಮಲ್ಲಿಕಾರ್ಜುನ ಅಣ್ಣಿಕೇರಿ, ರವಿ ಸಿಂಧಗಿ, ಶ್ರೀಶೈಲ ಪುರಾಣಿಕ, ವಿಠ್ಠಲ್ ರಾಠೋಡ, ಸುರೇಶ ನಾಟೇಕರ್, ಆನಂದ ಆರ್.ಎನ್, ಶಿವಪ್ಪ ಮುಂಡರಗಿ, ಸಂದೀಪ ಕಟ್ಟಿ, ಶರಣುಕುಮಾರ ದೋಶೆಟ್ಟಿ ಸೇರಿದಂತೆ ವಿವಿಧ ಬಡಾವಣೆಗಳ ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ತಹಶೀಲ್ದಾರ್ ನಾಗಯ್ಯ ಹಿರೇಮಠ ಸ್ಥಳಕ್ಕಾಗಮಿಸಿ ಮನವಿಪತ್ರ ಜೊತೆಗೆ ಸಾರ್ವಜನಿಕರಿಂದ ಸಂಗ್ರಹಿಸಲಾದ ಸಸಿಗಳನ್ನು ಸ್ವೀಕರಿಸಿದರು. ಬೇಡಿಕೆಗಳ ಈಡೇರಿಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!