Oplus_0

ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲ: ಹಣಮಂತ ಇಟಗಿ ಆರೋಪ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಪಂಚ ಗ್ಯಾರಂಟಿಗಳ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಜನಕಲ್ಯಾಣವನ್ನು ಮರೆತಿದ್ದು, ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು  ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಿ. ದೇವರಾಜ ಅರಸು ಅವರ ಆಡಳಿತಾವಧಿಯ ದಾಖಲೆಯನ್ನು ಮುರಿದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮಿಸುತ್ತಿರುವುದು ಜನರ ಕಷ್ಟದ ಮೇಲೆ ಸಂಭ್ರಮಿಸುವಂತಿದೆ. ಅಧಿಕಾರ ನೀಡಿದ ಜನರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಅಸಮರ್ಪಕ ನಿರ್ವಹಣೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ಬಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮುಂದಿನ ಪೀಳಿಗೆಗೆ ಉಪಯುಕ್ತವಾಗುವ ಒಂದೇ ಒಂದು ಶಾಶ್ವತ ಆಸ್ತಿಯನ್ನೂ ಸರ್ಕಾರ ನಿರ್ಮಿಸಿಲ್ಲ ಎಂದು ಅವರು ಆರೋಪಿಸಿದರು.

ದಲಿತರಿಗೆ ಮೀಸಲಾದ ಎಸ್‌ಸಿಪಿ–ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ದಲಿತ ಸಮುದಾಯದ ಮೇಲೆ ನಡೆದ ಅನ್ಯಾಯವಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆಯನ್ನು ಬಯಲಿಗೆ ತಂದಿದೆ ಎಂದು ಹೇಳಿದರು.

ಮೂಡಾ ಹಗರಣದಲ್ಲಿ ಅಕ್ರಮವಾಗಿ ಪಡೆದ ನಿವೇಶನಗಳನ್ನು ಹಿಂದಿರುಗಿಸಿರುವುದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಾಚಾರ, ಡ್ರಗ್ಸ್ ದಂಧೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಇಟಗಿ ಆರೋಪಿಸಿದರು.

ಬೆಲೆ ಏರಿಕೆ, ನೋಂದಣಿ ಹಾಗೂ ಪಹಣಿ ಶುಲ್ಕ, ಮದ್ಯದ ದರ, ಜನನ–ಮರಣ ಪ್ರಮಾಣ ಪತ್ರ ಮತ್ತು ಸರ್ಕಾರಿ ಆಸ್ಪತ್ರೆಗಳ ಶುಲ್ಕಗಳ ಹೆಚ್ಚಳದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.

ಜನವಿರೋಧಿ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ತೊಲಗಬೇಕು ಎಂಬುದು ರಾಜ್ಯದ ಜನರ ಆಶಯವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!