ಶ್ರೀ ಸಿಮೆಂಟ್ ಕಂಪೆನಿ ವಿರುದ್ಧ ರೊಚ್ಚಿಗೆದ್ದ ರೈತರು, ಎಕರೆಗೆ ರೂ.25 ಸಾವಿರ ಪರಿಹಾರಕ್ಕೆ ಆಗ್ರಹ | ಬೆಳೆ ಹಾನಿ ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮಂಗಳವಾರ ಚುರುಕು ಪಡೆದಿದೆ. ಪ್ರತಿ ಎಕರೆಗೆ ರೂ.25 ಸಾವಿರ ಪರಿಹಾರಕ್ಕೆ ಆಗ್ರಹಿಸಿ ಜನವರಿ 23 ರಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಶ್ರೀ ಸಿಮೆಂಟ್ ಕಂಪನಿಯ ವಿರುದ್ಧ ರೊಚ್ಚಿಗೆದ್ದ ರೈತರು ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಪ್ರಾರಂಭ ಮಾಡಿದ್ದಾರೆ.
ರಸ್ತೆಯಲ್ಲಿ ಅಡ್ಡಲಾಗಿ ಕ್ರೇನ್ ನಿಲ್ಲಿಸಿ ಧರಣಿ ನಡೆಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಪ್ರತಿಭಟನೆ ನಡೆಸಿ ಸಂಜೆ ನಾವು ಮನೆಗೆ ಹೋಗುತ್ತಿದ್ದೇವೆ. ಕಂಪನಿಯವರು ರಾತ್ರಿ ಸಮಯದಲ್ಲಿ ಕ್ಲಿಂಕರ್ ಘಟಕ ಅರಂಭಿಸಿ ಗೂಡ್ಸ್ ರೈಲಿನ ಮೂಲಕ ಸಾಗಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಸಾಗಾಟ ಮಾಡಿ ರೈತರ ಸಮಸ್ಯೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ರೈತರ ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ರೈತರಾದ ರಮೇಶ ಬೊಮ್ಮನಳ್ಳಿ, ನಾಗರಾಜ ರೇಷ್ಮಿ, ಮಲ್ಲಿಕಾರ್ಜುರೆಡ್ಡಿ ಆಲೂರ್ ಅವರು ತಿಳಿಸಿದ್ದಾರೆ.

