Oplus_0

ಕಸಾಪದಿಂದ ಕಾಲೇಜಿನ ಶೈಕ್ಷಣಿಕ ಅಂಗಳದಲ್ಲಿ ಸಾಹಿತ್ಯ ಚಿಂತನೆ ಕಾರ್ಯಕ್ರಮ | ವಿದ್ಯಾರ್ಥಿಗಳೇ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ: ಸಲಾದಪುರ

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ವಿದ್ಯಾರ್ಥಿಗಳು ಮಾದಕ ವಸ್ತುಗಳಂತಹ ದುಶ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆಯುವ ಮೂಲಕ ವೈಚಾರಿಕತೆಯನ್ನೊಳಗೊಂಡ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಸಲಹೆ ನೀಡಿದರು.

ನಗರದ ಪ್ರಾರ್ಥನಾ ಪದವಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ “ಕಾಲೇಜಿನ ಶೈಕ್ಷಣಿಕ ಅಂಗಳದಲ್ಲಿ ಸಾಹಿತ್ಯ ಚಿಂತನೆ” ಕಾರ್ಯಕ್ರಮದ ಅಂಗವಾಗಿ “ಕುವೆಂಪು ವೈಚಾರಿಕತೆ ಪ್ರಜ್ಞೆ” ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ, ಸಮಾಜ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಸಾಪ ಶಹಾಪುರ ಆಯೋಜಿಸಿರುವ ಈ ಉಪನ್ಯಾಸ ಕಾರ್ಯಕ್ರಮ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದರು.

ರಸ ಋಷಿ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಕುವೆಂಪು ಒಂದು ವಿಶ್ವವಿದ್ಯಾಲಯ ಅವರ ಬಗ್ಗೆ ದಿನಪೂರ್ತಿ ವಿಷಯ ಮಂಡನೆ ಮಾಡಬಹುದು. ಅಂತಹ ಅದ್ಭುತ ಸಾಹಿತಿಯ ಸಾಹಿತ್ಯ ಓದಿ ಅರ್ಥೈಸಿಕೊಂಡಾಗ ಮಾತ್ರ ನಿಮ್ಮ ವಿದ್ಯಾರ್ಥಿ ಜೀವನಕ್ಕೆ ಮಹತ್ವ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಭೀಮರಾಯ ಅಂಚೆಸುಗೂರ, ಮತ, ಮೌಢ್ಯ ಹಾಗೂ ಅಂಧನಂಬಿಕೆಗಳನ್ನು ತೊರೆದು ವೈಜ್ಞಾನಿಕ ನೆಲೆಯಲ್ಲಿ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ಕುವೆಂಪು ಪ್ರತಿಪಾದಿಸಿದ “ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಸಮಾನತೆ ಹಾಗೂ ಮಾನವೀಯತೆಯ ಸಂದೇಶಗಳನ್ನು ವಿದ್ಯಾರ್ಥಿಗಳು ಇವುಗಳನ್ನು ಬದುಕಿನಲ್ಲಿ ಆದರ್ಶವನ್ನಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ ಅವರು, ಕುವೆಂಪು ಈ ನಾಡಿನ ಪ್ರಬುದ್ಧ ಕವಿಯಾಗಿದ್ದಾರೆ. ಮನುಕುಲದ ಬೆಳವಣಿಗೆಗೆ ಅಡ್ಡಿಯಾದ ಮೌಢ್ಯ ಮತ್ತು ಕಂದಾಚಾರಗಳಿಗೆ ಬಲಿಯಾಗದೆ ಶುದ್ಧ ಚಾರಿತ್ರ್ಯ ಹೊಂದಿದ ನವ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಲೇಜು ವತಿಯಿಂದ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಾರ್ಥನಾ ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಬಸವರಾಜ ಸಾದ್ಯಾಪುರ, ಪ್ರಾಚಾರ್ಯ ದೇವೀಂದ್ರಪ್ಪ ಬಡೆಗೇರ, ಕಸಾಪ ಪದಾಧಿಕಾರಿಗಳಾದ ಪ್ರಕಾಶ ದೊರೆ, ಸಾಯಿಬಣ್ಣ ಪುರ್ಲೆ, ದೇವಿಂದ್ರಪ್ಪ ವಿಶ್ವಕರ್ಮ, ಮಲ್ಲಿನಾಥ ಬಡಿಗೇರ್ ದವಲಪ್ಪ ಸಜ್ಜನ್ ಬಸವರಾಜ ಗುಡಿಮನಿ, ಬಸವರಾಜ ಬಳಬಟ್ಟಿ ನಿಂಗಣ್ಣ ಯಕ್ಷಿಂತಿ ತೋಟಪ್ಪ ಜನ್ನಾ, ಹನುಮಂತ ಹಳ್ಳದಮನಿ, ಬಿ.ಎಂ. ಪೂಜಾರಿ, ಗುಂಡಪ್ಪ ಶೇಕಪ್ಪ ವಾರಿ, ನಿಂಗಣ್ಣ ತಿಪ್ಪನಟಗಿ ಸೇರಿದಂತೆ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮಾನಪ್ಪ ಹುರಸಗುಂಡಗಿ ಪ್ರಾರ್ಥಿಸಿದರು, ಉಪನ್ಯಾಸಕ ಸುರೇಶ್ ಕೆ. ಅರುಣಿ ನಿರೂಪಿಸಿದರು, ಉಪನ್ಯಾಸಕ ರವಿಕುಮಾರ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!