ವಾಡಿ ಪಟ್ಟಣದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ, ಶ್ರೀ ಹಿಂಗುಲಾಂಬಿಕಾ ಮಂದಿರದಲ್ಲಿ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಶ್ರೀ ಹಿಂಗುಲಾಂಬಿಕಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಪಕ್ಷದ ಸಂಸ್ಥಾಪಕರಾದ ಪಂಡಿತ್ ದೀನದಯಾಳ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡ ಮುಖಂಡರು ಜೈ ಘೋಷಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರಾಷ್ಟ್ರೀಯ ಚಿಂತನೆಗಳ ಮೂಲಕ ಪಕ್ಷದೊಂದಿಗೆ ಈ ತಾಯ್ನಾಡಿನ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ನಮ್ಮ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮಕ್ಕಾಗಿ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯಾಗಿದೆ ಎಂದರು.
ನಮ್ಮ ಪಕ್ಷದ ಮೂಲವನ್ನು 1951 ರಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ದೆಹಲಿಯಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗಿನಿಂದ ಗುರುತಿಸಬಹುದು. ನಂತರ 1975-77 ರಲ್ಲಿ ಪಕ್ಷವು ಇತರ ರಾಜಕೀಯ ಪಕ್ಷಗಳೊಂದಿಗೆ ವಿಲೀನಗೊಂಡು ಜನತಾ ಪಕ್ಷವನ್ನು ರಚಿಸಿ ಜನತಾ ಪಕ್ಷವನ್ನು ರಚನೆಯಾಯಿತು.
1957 ರ ಲೋಕಸಭಾ ಚುನಾವಣೆಯಲ್ಲಿ ಕೇವಲ 4 ಸ್ಥಾನಗಳನ್ನು, 1962 ರಲ್ಲಿ 14, 1967 ರಲ್ಲಿ 35 ಸ್ಥಾನಗಳನ್ನು ಮತ್ತು ನಂತರ 1977 ರಲ್ಲಿ ಜನ ಸಂಘವು ಇತರ ಪಕ್ಷಗಳೊಂದಿಗೆ ವಿಲೀನಗೊಂಡು ಜನತಾ ಪಕ್ಷವನ್ನು ರಚಿಸಿದಾಗ, ಅವರು ಮೊರಾರ್ಜಿ ದೇಶಾಯಿ ನೇತೃತ್ವದಲ್ಲಿ ಲೋಕಸಭೆಯಲ್ಲಿ 295 ಸ್ಥಾನಗಳನ್ನು ಗೆದ್ದ ಸರ್ಕಾರವನ್ನು ರಚಿಸಿದರು.
ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಜನತಾ ಪಕ್ಷವು ಭುಗಿಲೆದ್ದಿತು, ಇದರ ಪರಿಣಾಮವಾಗಿ, 1980 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. ಅಂತಿಮವಾಗಿ, ಏಪ್ರಿಲ್ 6, 1980 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಹೊಸ ಭಾರತೀಯ ಜನತಾ ಪಕ್ಷವನ್ನು ರಚಿಸಲಾಯಿತು ಮತ್ತು ಅದರ ಮೊದಲ ಅಧ್ಯಕ್ಷರಾದರು.
ಅಂದಿನಿಂದ ಇಲ್ಲಿಯವರೆಗೆ ಕೋಟ್ಯಾಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಪರಿಣಾಮದಿಂದ ಜಗತ್ತಿನಲ್ಲೇ ಬೃಹತ್ ಪಕ್ಷವಾಗಿ, ದೇಶದ ಪ್ರಧಾನಿ ಮೋದಿಜಿ ಅವರು ವಿಶ್ವದ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿ ರಾಷ್ಟ್ರದ ಹಿರಮೆ ಸಾರಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜಗೌಡ ಗೌಡಪ್ಪನೂರ, ಮಹಾಂತೇಶ ಬಿರಾದಾರ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ಅಶೋಕ ಪಂಚಾಳ, ವಿಶ್ವನಾಥ ಪುಲ್ಸೇ, ವಿಜಯಕುಮಾರ ಸುತ್ರಾವೆ, ಶ್ರೀಕಾಂತ ಕಾನಕುರ್ತೆ, ಶಾಂತಪ್ಪ ಪರಿಟ್, ಶ್ರೀನಿವಾಸ ರಾಂಪೂರಹಳ್ಳಿ ಸೇರಿದಂತೆ ಇತರರು ಇದ್ದರು.

