ಭಕ್ತಸಮೂಹ ನಡುವೆ ಕಾಖಂಡಕಿ ಜಾತ್ರಾ ಮಹೋತ್ಸವ, ತನಾರತಿ ಹರಕೆ ಸಮರ್ಪಿಸಿದ ಭಕ್ತರು
ನಾಗಾವಿ ಎಕ್ಸಪ್ರೆಸ್
ಯಡ್ರಾಮಿ: ತಾಲೂಕಿನ ಶ್ರೀ ಕ್ಷೇತ್ರ ಕಾಖಂಡಕಿ ಶ್ರೀ ಸದ್ಗುರು ಮಲ್ಲಾರಾಧ್ಯ ಕೋರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಲವಾರ ಮತ್ತು ಕಾಖಂಡಕಿ ಶ್ರೀ ಮಠದ ಪೀಠಾಧಿಪತಿ ಪೂಜ್ಯ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸನ್ನಿಧಾನದಲ್ಲಿ ತನಾರತಿ ಉತ್ಸವ ವೈಭವದಿಂದ ನಡೆಯಿತು.
ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ತನಾರತಿ ಮಹೋತ್ಸವವು, ಸಹಸ್ರಾರು ಭಕ್ತರ ಮಧ್ಯೆ ಬಾದಾಮಿ ಅಮಾವಾಸ್ಯೆಯ ದಿನವಾದ ಶನಿವಾರ ಮಧ್ಯರಾತ್ರಿ ಭಕ್ತಿ ಭಾವದಿಂದ ನೆರವೇರಿತು.
ದಕ್ಷಿಣ ಭಾರತದ ಮಹಾದೀಪ ಮೇಳವೆಂದೇ ಪ್ರಖ್ಯಾತವಾದ ನಾಲವಾರದ ಶ್ರೀ ಮಠದ ಪಾರಂಪರಿಕ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಶ್ರೀ ಸದ್ಗುರು ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.
ಸದ್ಗುರು ಶ್ರೀ ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ರ ಜಾತ್ರಾ ಮಹೋತ್ಸವದ ಪ್ರಯುಕ್ತ ತನಾರತಿ ಉತ್ಸವವು ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಅತ್ಯಂತ ವೈಭವದಿಂದ ನಡೆಯಿತು.
ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ, ಪುಷ್ಪಾಲಂಕೃತವಾಗಿ, ತನಾರತಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದರು.
ಪುರವಂತಿಕೆ, ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ನಡೆದ ಈ ಉತ್ಸವ ರವಿವಾರ ಮಧ್ಯರಾತ್ರಿ ಪ್ರಾರಂಭವಾಗಿ ಇಂದು ರವಿವಾರ ಬೆಳಗಿನ ಜಾವದ ವರೆಗೂ ನಡೆಯಿತು.
ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆಗಳನ್ನು ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆಯನ್ನು ಅನುಭವಿಸಿದರು.
ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆಯನ್ನು ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠ ಮತ್ತು ಕಾಖಂಡಕಿ ಪಾರಂಪರಿಕ ಉತ್ಸವವಾಗಿದೆ.
ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ರೀತಿಯ ವೈಶಿಷ್ಟ್ಯ ಪೂರ್ಣ ಉತ್ಸವ ನಾಡಿನ ಯಾವುದೇ ಭಾಗದಲ್ಲಿ ಕಾಣಸಿಗುವುದಿಲ್ಲ. ನಾಲವಾರದ ಜಾತ್ರಾ ಮಹೋತ್ಸವದ ವಿಶೇಷಗಳಲ್ಲಿ ತನಾರತಿ ಉತ್ಸವ ಮಹತ್ವದ್ದಾಗಿದ್ದು, ಜಾತಿ ಮತ ಪಂಥಗಳನ್ನು ಮರೆತು ಸಹಸ್ರಾರು ಭಕ್ತರು ಹರಕೆಯನ್ನು ಸಮರ್ಪಿಸುವ ದೃಶ್ಯ ನಯನಮನೋಹರ ಮಾತ್ರವಲ್ಲದೇ ಆಸ್ತಿಕ ಮನಸ್ಸುಗಳನ್ನು ಭಕ್ತಿಭಾವದಲ್ಲಿ ತೇಲಾಡುವಂತೆ ಮಾಡುತ್ತದೆ.

