ಅಳ್ಳೋಳ್ಳಿ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಜ.23 ರಿಂದ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದ ಮಹಾತ್ಮಾಪೀಠ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಇದೇ ಜ.23 ರಿಂದ ಪ್ರಾರಂಭವಾಗಿ ಫೆ.17 ರಂದು ಮುಕ್ತಾಯವಾಗಲಿದೆ ಎಂದು ಮಠದ ಪರಮಭಕ್ತ, ಬಾಬು ಜಗಜೀವನರಾಮ್ ಸಮಿತಿ ಅಧ್ಯಕ್ಷ ರಾಜಣ್ಣ ಕರದಾಳ ತಿಳಿಸಿದ್ದಾರೆ.
11ನೇ ಶತಮಾನದ ಧರ್ಮಕ್ರಾಂತಿಕಾರರು ಧಾರ್ಮಿಕ ಸಂಘರ್ಷಣೆಯಲ್ಲಿ ಭಾಗವಹಿಸಿ ಹಿಂದೂ ಧರ್ಮದ ಆರೂಢ ಮತವನ್ನು ಎತ್ತಿ ಹಿಡಿದಿದ್ದಾರೆ. ಶ್ರೀ ವಿರಾಟ ವಿಶ್ವಕರ್ಮ ಜಗದ್ಗುರು ಶ್ರೀ ಮೌನೇಶ್ವರರು ಕರ್ನಾಟಕದಲ್ಲೆಲ್ಲಾ ಅನೇಕ ಪವಾಡಗಳನ್ನು ಮಾಡಿದ ಮಹಾಯೋಗಿಗಳವರು ಅವರ ವರಪ್ರಸಾದಿಕಾರರಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದರು. ಇವರ ಪವಾಡಗಳು ಒಂದಲ್ಲ ಸಾವಿರಾರು ಪವಾಡಗಳಾಗಿವೆ. ಇವರ ತರುವಾಯ ಬಂದ ಮಠದ ಲೀಲಾ ಪುರುಷರು ಸರ್ವಧರ್ಮಗಳನ್ನು ಸಮನಾಗಿ ಕಂಡು ಜನರಲ್ಲಿ ಭಾವೈಕ್ಯತೆಯನ್ನುಂಟು ಮಾಡಿದ ಅಗ್ರಗಣ್ಯರು. ಇಂತಹ ಮಹಾತ್ಮರ ನಿಲುಮೆ ಈ ಅಳ್ಳೋಳ್ಳಿ ಗ್ರಾಮವಾಗಿದೆ.
ಇಲ್ಲಿಯ ಕಾರಣಿಕ ಪೂಜೆಯು ತುಂಬಾ ಮಹತ್ವದಾಗಿದ್ದು, ದೇಶದ ಭವಿಷ್ಯ, ಮಳೆ, ಬೆಳೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಸೂಚಿಸುವಂಥದ್ದಾಗಿದೆ. ಇಂತಹ ಪವಿತ್ರ ಕ್ಷೇತ್ರದ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜರಗುವುದು. ಆದಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರಾಧಿಪತಿಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.
ಅವರಾತ್ರಿ ಅಮವಾಸ್ಯೆ ಜ.18 ರಂದು ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಆರಾಧನೆ ನಡೆಯಲಿದೆ.
ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರಣೆ:
ಜ.23 ರಂದು ಗಂಗಾಸ್ಥಳ, 24 ರಂದು ಮಹಾಪ್ರಸಾದ ಉಷಃಕಾಲ ಕಾರಣಿಕ ಪೂಜೆ, 25 ರಂದು ಮಹಾಸೇವಾ ಹಾಗೂ ರಾತ್ರಿ 9 ಗಂಟೆಗೆ ಪೂಜ್ಯಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳವರ ತುಲಾಬಾರ ಕಾರ್ಯಕ್ರಮ ಜರಗುವುದು, 26 ರಂದು ಕೈ ಕುಸ್ತಿ, 28 ರಂದು ದಶಮಿ ಮೌನೇಶ್ವರ ಮಹಾಪ್ರಸಾದ, 29 ರಂದು ದಶಮಿ ಸೇವಾ, 31 ರಂದು ಹಾಲೋಕುಳಿ, ಫೆ.6 ರಂದು ಗಂಗಮ್ಮನ ಪೂಜೆ, ಫೆ.10 ರಂದು ತುರಕರ ಲಂಕಿ ಪ್ರಸಾದ, ಫೆ.16 ರಂದು ಶಿವರಾತ್ರಿ ಜಾಗರಣೆ, ಫೆ.17 ರಂದು ಶಿವರಾತ್ರಿ ಅಮವಾಸ್ಯೆ,
ದನಗಳ ಜಾತ್ರೆ:
ಅವರಾತ್ರಿ ಅಮವಾಸ್ಯೆಯಿಂದ 5 ದಿನಕ್ಕೆ ಪಂಚಮಿ ಎಂದು ಪರಿಗಣಿಸಲಾಗುವುದು. ಮಿತಿಗಳ ಏರಿಳಿತ ಜಾತ್ರೆಗೆ ಸಂಬಂಧವಿಲ್ಲ ಜ. 26 ರಿಂದ 10 ದಿನಗಳ ವರೆಗೆ ದನಗಳ ಜಾತ್ರೆ ಇರುತ್ತದೆ. ಕಾರಣ ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಎಚ್ಚರ ತಂಗಿ ಎಚ್ಚರ ನಾಟಕ ಪ್ರದರ್ಶನ:
ಜ.25 ರಿಂದ ಸತತ (5 ದಿನಗಳವರೆಗೆ) ಪ್ರತಿದಿನ ರಾತ್ರಿ 10.30 ಗಂಟೆಗೆ “ಎಚ್ಚರ ತಂಗಿ ಎಚ್ಚರ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶಿಸಲಾಗುವುದು. ಜ.25 ರಿಂದ 29 ರ ವರೆಗೆ ಹೆಚ್ಚಿನ ಬಸ್ಸುಗಳ ಸೌಕರ್ಯ ಇರುತ್ತದೆ. (ಯಾದಗಿರ, ಗುರುಮಠಕಲ್, ಕಲಬುರಗಿ, ಸೇಡಂ, ಚಿತ್ತಾಪುರ ಡಿಪೋಗಳಿಂದ)

