ಅಳ್ಳೋಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನ ಅನುದಾನ ದುರ್ಬಳಕೆ | ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಗುತ್ತೇದಾರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತಿಯ 15ನೇ ಹಣಕಾಸಿನ ಯೋಜನೆಯಡಿ ಕಾಮಗಾರಿ ಆಗದೆ ಹಣ ದುರ್ಬಳಕೆ ಮಾಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತನಿಖೆಗೆ ಆದೇಶ ಮಾಡಬೇಕು ಎಂದು ಗ್ರಾಪಂ ಸದಸ್ಯ ಆಂಜಲಯ್ಯ ಅನಂತಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ ಅವರು, ಅಳೋಳ್ಳಿ ಗ್ರಾಮ ಪಂಚಾಯತಿಯಲ್ಲಿ 2024-25 ನೇ ಸಾಲಿನ 15ನೇ ಹಣಕಾಸಿನ ಗುರಿಗೆ ಅನುಗುಣವಾಗಿ ನಿರ್ಬಂದಿತ ಹಾಗೂ ಅನಿರ್ಬಂದಿತ ಅನುದಾನಗಳಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು, ಸದರಿ ಕಾಮಗಾರಿಗಳಂತೆ ಅನುಮೋದಿತ ಕ್ರಿಯಾ ಯೋಜನೆಯ ಕೆಲವು ಕಾಮಗಾರಿಗಳನ್ನು ಕಾಮಗಾರಿ ನಿರ್ವಹಿಸದೆ ಹಣ ದುರ್ಬಳಕೆ ಮಾಡಲಾಗಿದೆ. ಹಾಗೂ ಇನ್ನು ಕೆಲವು ಸದಸ್ಯರುಗಳ ತಮ್ಮ ತಮ್ಮ ವಾರ್ಡಗಳಲ್ಲಿ ಸಾಮಾನ್ಯ ಸಭೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವೆಲ್ಲ ಕಾಮಗಾರಿಗಳ ಮೊತ್ತವನ್ನು ಕಾಮಗಾರಿ ನಿರ್ವಹಿಸದೆ ಹಣ ದುರ್ಬಳಕೆ ಮಾಡಿಕೊಂಡು ಸರ್ಕಾರದ ಅನುದಾನವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸದರಿ 2024-25 ನೇ ಸಾಲಿನ 15ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಹಣ ದುರ್ಬಳಕೆ ಮಾಡಿರುವ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

