ಚಿತ್ತಾಪುರ ತಹಸೀಲ್ದಾರ್ ಗೆ ಮನವಿ | ಅಂಬೇಡ್ಕರ್ ಜಯಂತೋತ್ಸವದಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತೋತ್ಸವಕ್ಕೆ ಗೈರಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ಬುಧವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಏ.14 ರಂದು ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತೋತ್ಸವ ಸಮಾರಂಭದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಅಧಿಕಾರಿ ರಾಜಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ವೀರನಾಥ ಕನಕ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರೆ ಹಾಗೂ ಇನ್ನಿತರ ಅಧಿಕಾರಿಗಳು ಗೈರಾಗಿದ್ದು, ರಾಷ್ಟ್ರ ನಾಯಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆ ಹಾಗೂ ದಲಿತರಿಗೆ ಮತ್ತು ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ಸರ್ಕಾರದ ವತಿಯಿಂದ ಆಚರಿಸಲ್ಪಡುವ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು, ಆದರೆ ಸದರಿ ಅಧಿಕಾರಿಗಳು ಗೈರು ಹಾಜರಿ ಆಗುವ ಮೂಲಕ ಬಾಬಾಸಾಹೇಬರ ಬಗ್ಗೆ ನಿರ್ಲಕ್ಷ್ಯತೆ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಆದ್ದರಿಂದ ಸದರಿ ಅಧಿಕಾರಿಗಳು ಹಾಗೂ ಈ ಜಯಂತಿಯಲ್ಲಿ ಪಾಲ್ಗೊಳ್ಳದೇ ಇರುವ ಇನ್ನಿತರ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಮುಡುಬೂಳಕರ್, ಜಗನ್ನಾಥ ಮುಡುಬೂಳಕರ್, ಸೂರಜ್ ಕಲ್ಲಕ್, ಶಿವುಕುಮಾರ ಆರಬೋಳ, ಸಾಬಣ್ಣ ಹಲಗಿ, ಶಿವುಕುಮಾರ ಯಾದಗಿರ ಸೇರಿದಂತೆ ಇತರರು ಇದ್ದರು.

