ಬರಗಾಲದಿಂದ ಬೇಸತ್ತ ಚಿಂಚೋಳಿ.ಹೆಚ್ ಗ್ರಾಮದ ರೈತ | ತಾನು ಬೆಳೆದಿರುವ ಬೆಳೆಯನ್ನೇ ದನ ಕರುಗಳಿಗೆ ಧಾರೆ ಎರೆದ
ನಾಗಾವಿ ಎಕ್ಸಪ್ರೆಸ್ ವಿಶೇಷ ವರದಿ
ಕಾಳಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಗಾಲದಿಂದ ಅತ್ಯಂತ ಘೋರ ಪರಿಸ್ಥಿತಿ ಉಂಟಾಗುತ್ತಿದೆ, ಕಾಳಗಿ ತಾಲೂಕಿನ ಚಿಂಚೋಳಿ. ಹೆಚ್ ಗ್ರಾಮದಲ್ಲಿ ಮಳೆ ಬಾರದ ಕಾರಣ ರೈತನೊಬ್ಬ ಬೇಸತ್ತು ಸುಮಾರು 40 ಎಕರೆ ಬಿತ್ತನೆ ಮಾಡಿರುವ ಹೆಸರು, ಉದ್ದು, ತೊಗರಿ ಬೆಳೆಯನ್ನು ದನ ಕರುಗಳಿಗೆ ಮೇವಿಲ್ಲದೆ ನರಳಾಡುತ್ತಿರುವುದನ್ನು ಕಂಡು ರೈತನೊಬ್ಬ ತಾನು ಬೆಳೆದಿರುವ ಬೆಳೆಯನ್ನೇ ದನ ಕರುಗಳಿಗೆ ತಿನಿಸುವ ದೃಶ್ಯ ಕಂಡು ಬಂದಿದೆ.
ಹಸಿರು ಹುಲ್ಲು ಸಿಗದೆ ದನಕರುಗಳು ಹಸಿವಿನಿಂದ ಒದ್ದಾಟವನ್ನು ನೋಡಿದ ರೈತನು ತನ್ನ ಸ್ವಂತ ಹೊಲದಲ್ಲಿ ಬಿತ್ತಿರುವ ಬೆಳೆಯನ್ನೇ ದನ ಕರುಗಳಿಗೆ ಮೇವಾಗಿ ಕೊಟ್ಟಿರುವುದನ್ನ ಕಂಡು ಬಂದಿರುವುದು ವಿಶೇಷ. ಬರಗಾಲವು ರೈತನ ಬದುಕನ್ನು ಸಂಪೂರ್ಣವಾಗಿ ಕಸಿದುಕೊಂಡು, ಅವನನ್ನು ಕಣ್ಣೀರಿನ ಕಡಲಿನಲ್ಲಿ ಮುಳುಗಿಸುತ್ತದೆ. ಮಳೆಯಿಲ್ಲದೆ ಬಿತ್ತಿದ ಬೆಳೆಗಳು ಮೊಳಕೆಯಲ್ಲೇ ಕರಗಿ ಹೋಗುತ್ತಿವೆ.
ಬಿತ್ತನೆ ಬೀಜ, ಗೊಬ್ಬರ ಮತ್ತು ಕೂಲಿಗಾಗಿ ಮಾಡಿದ ಖರ್ಚು ಕೈಗೆ ಬರುವುದಿಲ್ಲ. ವರ್ಷಪೂರ್ತಿ ಕಷ್ಟಪಟ್ಟರೂ ನಯಾಪೈಸೆ ಆದಾಯ ಸಿಗುವುದಿಲ್ಲ. ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ ಕುಡಿಯಲು ನೀರಿರುವುದಿಲ್ಲ. ಬರಗಾಲದ ರೈತರ ಗೋಳು ಎನ್ನುವುದು ಕೇವಲ ಶಬ್ದಗಳಲ್ಲ, ಅದು ಇಡೀ ಸಮಾಜಕ್ಕೆ ಅನ್ನ ನೀಡುವ ಅನ್ನದಾತನ ಕಣ್ಣೀರಿನ ಕಥೆ. ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟಾಗ, ಭೂಮಿ ತಾಯಿ ಒಣಗಿ ಬಿರುಕು ಬಿಡುತ್ತದೆ. ಆಗ ರೈತನ ಬದುಕು ಸಂಪೂರ್ಣವಾಗಿ ಅಸ್ವಸ್ಥವಾಗಿದೆ, ಕಷ್ಟಪಟ್ಟು ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಅಥವಾ ಬೆಳೆದ ಬೆಳೆಗಳು ನೀರಿಲ್ಲದೆ ಒಣಗಿ ಸಂಪೂರ್ಣವಾಗಿ ನಾಶವಾಗುತ್ತಿವೆ.
ನಾವು ಪ್ರತಿದಿನ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಹೊಲದಲ್ಲಿ ಬೆವರು ಹರಿಸುವ ರೈತ. ಆದರೆ ಇಂದು ಅದೇ ರೈತ ಬರಗಾಲದ ಭೀಕರತೆಗೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ಮಳೆ ಬಾರದಿದ್ದರೆ ರೈತನ ಬದುಕು ಕತ್ತಲಾಗುತ್ತದೆ. ಬಿತ್ತಿದ ಬೀಜ ಮೊಳಕೆಯೊಡೆಯದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಬರಗಾಲ ಬಂತೆಂದರೆ ಕೇವಲ ಬೆಳೆ ಒಣಗುವುದಿಲ್ಲ, ರೈತನ ಕನಸುಗಳು ಒಣಗುತ್ತವೆ.
ಸಾಲಗಾರರ ಕಾಟ, ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ ಅವನನ್ನು ದಿನವೂ ಕಾಡುತ್ತದೆ. ಸಾಕಿದ ದನಕರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಇಡೀ ಹಳ್ಳಿಯೇ ಸ್ಮಶಾನದಂತಾಗುತ್ತದೆ. ಕೊನೆಗೆ ಬೇರೆ ದಾರಿಯಿಲ್ಲದೆ ಅನ್ನದಾತನೇ ಆತ್ಮಹತ್ಯೆಯ ಹಾದಿ ಹಿಡಿಯುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
“ನಾವು ಕೇವಲ ‘ಜೈ ಕಿಸಾನ್’ ಎಂದು ಘೋಷಣೆ ಕೂಗಿದರೆ ಸಾಲದು. ಬರಗಾಲದ ಸಮಯದಲ್ಲಿ ರೈತರಿಗೆ ಸೂಕ್ತ ಪರಿಹಾರ, ಉಚಿತ ಮೇವಿನ ಬ್ಯಾಂಕ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತನನ್ನು ಬದುಕಿಸಿದರೆ ಮಾತ್ರ ದೇಶ ಬದುಕಲು ಸಾಧ್ಯ”.-ವೀರಣ್ಣ ಗಂಗಾಣಿ ಅಧ್ಯಕ್ಷರು ರೈತ ಸಂಘ ಹಾಗೂ ರೈತ ಸೇನೆ ಕಾಳಗಿ.

