ಭಾಗೋಡಿ ಗ್ರಾಮದ ಬಹುದಿನದ ಬೇಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಂದನೆ | ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ, ಗ್ರಾಮಸ್ಥರ ಸಂತಸ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭಾಗೋಡಿ ಗ್ರಾಮಕ್ಕೆ ಸಾರಿಗೆ ಬಸ್ ಓಡಿಸಲು ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾರಿಗೆ ಬಸ್ ಸೌಲಭ್ಯ ಇಲ್ಲದ ಕಾರಣಕ್ಕೆ ಗ್ರಾಮಸ್ಥರಿಗೆ ಮತ್ತು ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿತ್ತು. ದೂರದ ಕಲಬುರಗಿ, ಯಾದಗಿರಿ, ಸೇಡಂ ಹಾಗೂ ಚಿತ್ತಾಪುರ ನಗರಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದರು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಕೂಡಲೇ ಬಸ್ ಸೌಲಭ್ಯ ಕಲ್ಪಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಸಚಿವರ ಆದೇಶ ಪಾಲನೆಗೆ ಮುಂದಾದ ಕಲಬುರಗಿ ಸಾರಿಗೆ ಘಟಕದ ವ್ಯವಸ್ಥಾಪಕರು ಗ್ರಾಮಕ್ಕೆ ಬಸ್ ಓಡಿಸಲು ಪ್ರಾರಂಭಿಸಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.
ಮೂಡಬೂಳ, ಭಾಗೋಡಿ, ಬೆಳಗುಂಪಾ, ಇವಣಿ ಪೇಠಶಿರೂರು ಹಾಗೂ ಸಣ್ಣೂರು ಕ್ರಾಸ್ ಮಾರ್ಗವಾಗಿ ತೆರಳುವ ಈ ಸಾರಿಗೆ ಬಸ್ ಕಲಬುರಗಿ, ಚಿತ್ತಾಪುರ ತಾಲೂಕಿನವರೆಗೆ ಸಂಚರಿಸಲಿದೆ. ಗ್ರಾಮಕ್ಕೆ ಪ್ರವೇಶ ಮಾಡಿದ ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಸ್ ಘಟಕ ವ್ಯವಸ್ಥಾಪಕ ಜಿ.ಬಿರಾದಾರ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಪಾಟೀಲ್, ಸರ್ಕಾರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವಿಂದ್ರ ಡೋಣಗಾಂವ, ಮುಖ್ಯಶಿಕ್ಷಕ ರವೀಂದ್ರ ರೆಡ್ಡಿ, ಮುಖಂಡರಾದ ರಾಜೇಂದ್ರಪ್ಪ ಅರಣಕಲ್, ಶರಣಬಸಪ್ಪ ಐನಾಪುರ್, ಶರಣಬಸಪ್ಪ ಬೆಂಕಿ, ಬಸವರಾಜ ಪಾಟೀಲ ದಳಪತಿ, ಮಲ್ಲಿಕಾರ್ಜುನ್ ದೊಡ್ಡಮನಿ, ದೇವಿಂದ್ರ ನಾಟೀಕಾರ, ಬಸವರಾಜ್ ಹಂಚಿನಾಳ, ಮುತ್ತಣ್ಣ ಶಿರೂರ್, ಮಲ್ಲಿಕಾರ್ಜುನ ಏರಿ, ಶಿವಕುಮಾರ್ ಕಲಬುರ್ಗಿ, ಭೋಜರಾಜ್ ಶೇರಿ, ಸಾಬಣ್ಣ ಬಿ. ಷೇರಿ, ರಮೇಶ್ ನೀಲಕಂಠ, ಮಹಾಂತಪ್ಪ ಹಾಸಬಾ, ಶಕೀಲ್ ಖುರೇಶಿ, ಮಲ್ಲಿಕಾರ್ಜುನ್ ನಾಯ್ಕೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಮಾತನಾಡಿ, ಭಾಗೋಡಿ ಜನತೆಯ ಹಾಗೂ ಶಾಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಸಚಿವರಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು. ಪ್ರತಿದಿನ ಬೆಳಿಗ್ಗೆ 8 ಕ್ಕೆ ಕಾಲುಬುರಗಿ ಕೇಂದ್ರ ಬಸ್ ನಿಲ್ದಾಣ ಬಿಟ್ಟು ಭಾಗೋಡಿಗೆ 9.30 ಕ್ಕೆ ಬಂದು ಚಿತ್ತಾಪುರಕ್ಕೆ ಹೋಗುವದು. ಇದರಿಂದ ನಮ್ಮ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.

