ಚಿತ್ತಾಪುರ ಬಸವ ಜಯಂತಿ ಆಚರಣೆ | ಬೃಹತ್ ಶೋಭಾಯಾತ್ರೆ, ಉಚಿತ ಆರೋಗ್ಯ ತಪಾಸಣಾ ಶಿಬಿರ: ಬಸವರಾಜ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ 893 ನೇ ಬಸವ ಜಯಂತಿ ಉತ್ಸವ ನಿಮಿತ್ತ ಏ.20 ರಂದು ಬೆಳಿಗ್ಗೆ 10.30 ಕ್ಕೆ ಬೃಹತ್ ಶೋಭಾಯಾತ್ರೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ ಹೇಳಿದರು
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ ವತಿಯಿಂದ ಪ್ರಜಾ ಸೌಧದಿಂದ ಬೆಳಗ್ಗೆ 9 ಗಂಟೆಗೆ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತಕ್ಕೆ ತಲುಪಿದ ನಂತರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ, ಡೊಳ್ಳುಗಳ ಜೊತೆಗೆ 70 ಜೋಡಿ ಎತ್ತುಗಳು ಮೆರವಣಿಗೆ ನಡೆಯಲಿದೆ. ಕುಡಿಯುವ ನೀರು ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಎಪಿಎಂಸಿ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿವಿಧ ರೋಗಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯುತ್ತದೆ ಬಸವ ಅಭಿಮಾನಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಮೆಡಿಕೇರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮುಖ್ಯಸ್ಥ ಡಾ.ಸುರೇಶ್ ಪಾಟೀಲ ಸಹಕಾರದೊಂದಿಗೆ ಶಿಬಿರದಲ್ಲಿ ಮೂಳೆ ತಜ್ಞರು, ಲ್ಯಾಪರೋಸ್ಕೋಪಿಕ್, ಜನರಲ್ ಮೇಡಿಷನ್, ಮಹಿಳಾ ತಜ್ಞರು, ಕೀಲು ನೋವು, ಮಕ್ಕಳ ತಜ್ಞರು, ಕಿವಿ ಪರೀಕ್ಷೆ, ಮಧುಮೇಹ, ಕಣ್ಣಿನ ಪರೀಕ್ಷೆ, ರಕ್ತದ ಒತ್ತಡ, ಸೀಳು ತುಟಿಗಳು, ಚರ್ಮ ರೋಗಕ್ಕೆ ಸಂಬಂಧಿಸಿದಂತೆ 15 ರಿಂದ 20 ಜನ ನುರಿತ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ಬಸವಾಭಿಮಾನಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಲಬುರಗಿಯ ಶರಣಬಸವೇಶ್ವರ ಮೈದಾನದಲ್ಲಿ ಏ.19 ರಂದು ಸಾಯಂಕಾಲ 4 ಗಂಟೆಗೆ ಬಿ.ಆರ್.ಪಾಟೀಲ, ಬಿ.ಜಿ.ಪಾಟೀಲ, ಶರಣಕುಮಾರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ ನರಿಬೋಳ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಮುಖಂಡರಾದ ಬಸವರಾಜ ಕಾಳಗಿ, ಬಸವರಾಜ ಸಂಕನೂರ, ಓಂಕಾರ ರೇಷ್ಮಿ, ಅಂಬರೀಷ್ ಸುಲೇಗಾಂವ, ಮಹಾದೇವ ಅಂಗಡಿ, ಕೋಟೇಶ್ವರ ರೇಷ್ಮಿ, ರಾಚಪ್ಪ ಬೊಮ್ಮನಳ್ಳಿ ಸೇರಿದಂತೆ ಇತರರು ಇದ್ದರು.

