ಭರತನೂರ ಲಿಂ.ಗುರುನಂಜೇಶ್ಬರ ಮಹಾಶಿವಯೋಗಿಗಳ 31 ನೇ ಪುಣ್ಯ ಸ್ಮರಣೆ, ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ 25 ನೇ ರಜತ ಮಹೋತ್ಸವ, ಮಾರ್ಚ್ 18 ರಿಂದ ಪ್ರಾರಂಭ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಭರತನೂರ ಗ್ರಾಮದ ಗುರುನಂಜೇಶ್ವರ ವಿರಕ್ತ ಮಠದ ಪರಮ ಪೂಜ್ಯ ಮಹಾತಪಸ್ವಿ ಲಿಂ. ಗುರುನಂಜೇಶ್ವರ ಮಹಾಶಿವಯೋಗಿಗಳ 31ನೇ ಪುಣ್ಯಸ್ಮರಣೆ ಹಾಗೂ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ನಿರಂಜನ ಚರ ಪಟ್ಟಾಧಿಕಾರದ 25ನೇ ರಜತ ಮಹೋತ್ಸವ ನಿಮಿತ್ತ ಮಾರ್ಚ 18 ರಿಂದ ಎಪ್ರಿಲ್ 9 ರವೆರೆಗೆ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುನಂಜೇಶ್ವರ ಮಠದ ಸಧ್ಬಕ್ತ ಮುರುಗಯ್ಯಸ್ವಾಮಿ ಮಠಪತಿ ತಿಳಿಸಿದ್ದಾರೆ.
ಪೂಜ್ಯ ಚಿಕ್ಕ ಗುರುನಂಜೇಶ್ವರ ಪಟ್ಟಾಧಿಕಾರದ 25ನೇ ರಜತ್ ಮಹೋತ್ಸವ ಹಾಗೂ ಲಿಂಗೈಕ್ಯ ಗುರುನಂಜೇಶ್ವರ ಮಹಾಶಿವಯೋಗಿಗಳ 31ನೇ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಮಾರ್ಚ್ 18ರಂದು ರಾಜಾಪೂರ ಗ್ರಾಮದಿಂದ ಭರತನೂರ ಗ್ರಾಮದ ಮಠದವರೆಗೆ 31ಎತ್ತಿನ ಬಂಡಿಯಲ್ಲಿ ಲಿಂ. ಗುರುನಂಜೇಶ್ವರ ಮಹಾಶಿವಯೋಗಿಗಳ ಬೆಳ್ಳಿ ಮೂರ್ತಿಯ ಕುಂಭ, ಕಳಸ ಮೆರವಣಿಗೆ ಜರುಗುವುದು ಹಾಗೂ ಲಿಂ.ಗುರುನಂಜೇಶ್ವರ ಶಿವಯೋಗಿಗಳ ಜೀವನ ಚರಿತ್ರೆಯ 21ದಿನಗಳ ಪುರಾಣ ಪ್ರಾರಂಭವಾಗುವುದು ಎಂದು ತಿಳಿಸಿದ್ದಾರೆ.
ಎಪ್ರಿಲ್ 7ರಂದು ಶ್ರೀಮಠದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ ಹಾಗೂ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ನಡೆಯಲಿದೆ.
ಎಪ್ರಿಲ್ 8 ರಂದು ಬೆಳಗ್ಗೆ 10 ಗಂಟೆಗೆ ರಜತ್ ಮಹೋತ್ಸವ ಕಾರ್ಯಕ್ರಮ, ಮಹಿಳಾ ಸಮಾವೇಶ, ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಸಾಯಂಕಾಲ 6 ಗಂಟೆಗೆ ಭಾವೈಕ್ಯತೆಯ ಸಮಾರಂಭ ಜರುಗುವುದು.
ಎಪ್ರಿಲ್ 9 ರಂದು ಬೆಳಗ್ಗೆ 10 ಗಂಟೆಗೆ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳಿಗೆ ಭಕ್ತರಿಂದ ತುಲಾಭಾರ ಸೇವೆ ಹಾಗೂ ಭರತನೂರಿನ ಬೆಳಕು ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗುವುದು. ಸಾಯಂಕಾಲ 4 ಗಂಟೆಗೆ ಕಲರ್ಸ್ ಕನ್ನಡದ ಖ್ಯಾತ ಗಾಯಕರು ಹಾಗೂ ಶಾಲಾ ಮಕ್ಕಳಿಂದ ರಸಮಂಜರಿ, ಸಾಂಸ್ಕೃತಿಕ, ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಡಿನ ಜಗದ್ಗುರುಗಳು, ಹರಗುರು ಚರಮೂರ್ತಿಗಳು, ಸಚಿವರು, ಶಾಸಕರು, ಸಾಹಿತಿಗಳು, ಗಣ್ಯರು, ಸಂಗೀತಗಾರರು, ಕಲಾವಿದರು ಆಗಮಸಲಿದ್ದಾರೆ ಎಂದು ತಿಳಿಸಿದ್ದಾರೆ.
