Oplus_0

ಬಿಜೆಪಿ ಚಿತ್ತಾಪುರ ಮಂಡಲದ ಬಿಎಲ್ಎ 2 ಕಾರ್ಯಾಗಾರ | ಮತದಾರರ ಪಟ್ಟಿ ಪರಿಷ್ಕರಣೆ ಕಾಂಗ್ರೆಸ್ ನವರಿಗೆ ಪುಕ್ ಪುಕ್ ಶೂರು: ರಾಜಕುಮಾರ್ ಪಾಟೀಲ ತೇಲ್ಕೂರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮೊದಲಿಂದಲೂ ಕಾಂಗ್ರೆಸ್ ನವರು ಮತಗಳ್ಳತನದಿಂದಲೇ ಗೆದ್ದಿದ್ದಾರೆ ಈಗ ಅದು ಸಾಧ್ಯವಿಲ್ಲ ಕಾರಣ ಎರಡು ಕಡೆ ಅರ್ಜಿ ಸಲ್ಲಿಸಿದ್ದರೆ, ಎರಡು ಕಡೆ ಮತ ಇದ್ದರೆ ಕಂಪ್ಯೂಟರ್ ಸಾಫ್ಟವೇರ್ ಕಂಡು ಹಿಡಿಯುತ್ತೆ ಹೀಗಾಗಿ ಕಾಂಗ್ರೆಸ್ ನವರಿಗೆ ಪುಕ್ ಪುಕ್ ಶೂರುವಾಗಿದೆ ಎಂದು ಮಾಜಿ ಶಾಸಕ, ಎಸ್ಐಆರ್ ಜಿಲ್ಲಾ ಸಂಚಾಲಕ ರಾಜಕುಮಾರ್ ಪಾಟೀಲ ತೇಲ್ಕೂರ್ ಹೇಳಿದರು.

ಪಟ್ಟಣದ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಭಾರತೀಯ ಜನತಾ ಪಕ್ಷದ ಚಿತ್ತಾಪುರ ಮಂಡಲದ ಬಿಎಲ್ಎ 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪರಿಷ್ಕರಣೆಯಿಂದ ಬಿಹಾರದಲ್ಲಿ 65 ಲಕ್ಷ ಕೊಟ್ಟಿ ಮತದಾರರು ಪತ್ತೆಯಾಗಿದ್ದಾರೆ ಹೀಗಾಗಿ ಅಲ್ಲಿನ ಜನರು ಕಾಂಗ್ರೆಸ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಜ್ಯದಲ್ಲಿಯೂ ಮತದಾರರ ಪರಿಷ್ಕರಣೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 25 ಸಾವಿರ ಕೊಟ್ಟಿ ಡೂಪ್ಲಿಕೇಟ್ ಮತದಾರರ ಪತ್ತೆಯಾಗಲಿದೆ, ಆಗ ಬರುವ 2028 ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 22 ಸ್ಥಾನಗಳು ಗೆಲ್ಲದೇ ವಿರೋಧ ಪಕ್ಷದ ಸ್ಥಾನವು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು

ಮತಗಳ್ಳತನ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಆಯ್ಕೆ ಮಾಡುವ ಸಮಯದಲ್ಲೇ ಪ್ರಾರಂಭವಾಗಿದೆ ಆಗ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರಧಾನಿ ಹುದ್ದೆಯಿಂದ ತಪ್ಪಿಸಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಮತಗಳ್ಳತನದಿಂದಲೇ ಎಂದು ಕುಟುಕಿದರು.

ಮಾತು ಎತ್ತಿದರೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ, ಅಂಬೇಡ್ಕರ್ ಅವರು ನಿಧನರಾದಾಗ ದಿಲ್ಲಿಯಲ್ಲಿ ಅಂತಿಮ ಸಂಸ್ಕಾರ ಮಾಡಲು ನಾಲ್ಕು ಗೆಂಡು ಜಾಗ ನೀಡಿಲ್ಲ, ಅವರಿಗೆ ಭಾರತರತ್ನ ನೀಡಿದ್ದು ಬಿಜೆಪಿ ಸರ್ಕಾರ, 2015 ರಲ್ಲಿ ಸಂವಿಧಾನ ದಿನಾಚರಣೆ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ, ಹೀಗಾಗಿ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವರಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ನವರು ಅಂಬೇಡ್ಕರ್ ಬಗ್ಗೆ ಬರಿ ಮಾತನಾಡುತ್ತಾರೆ ಅವರಿಗೆ ಗೌರವ ನೀಡಿಲ್ಲ ಆದರೆ ಬಿಜೆಪಿ ಅವರು ಅಂಬೇಡ್ಕರ್ ಅವರನ್ನು ಗೌರವಿಸಿದ್ದಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಸುಡುವ ಮನೆ ಅಂತ ಅಂಬೇಡ್ಕರ್ ಹೇಳಿದ್ದರು ಇದನ್ನು ಅವರ ಅನುಯಾಯಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇಂದಿರಾಗಾಂಧಿ ರಕ್ಷಿಸಲು ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸರ್ಕಾರ ತಮ್ಮ ಕುರ್ಚಿ ಉಳಿಸಿಕೊಳ್ಳಲು 99 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ ಅಲ್ಲದೇ 59 ರಾಜ್ಯ ಸರ್ಕಾರಗಳು ವಜಾ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷದ ಪಕ್ಷಕ್ಕೆ ಸಲ್ಲುತ್ತದೆ ಎಂದರು.

ಕುರ್ಚಿಗಾಗಿ ಕಾದು ಕುಳಿತ ಪ್ರಿಯಾಂಕ್ ಖರ್ಗೆ:

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವುಕುಮಾರ್ ಇಬ್ಬರ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವಾಗ ಚಿತ್ತಾಪುರ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ನನಗೆ ಯಾವಾಗ ಚಾನ್ಸ್ ಸಿಗುತ್ತದೆ ಎಂದು ಕಾದು ಕುಳಿತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ, ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ ಮೂರು ಕೆಡಿಪಿ ಸಭೆ ಮಾಡಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆ ಸಂಪೂರ್ಣ ನಾಶವಾದರೂ ಸಹ ಸಚಿವರು ಮಾತ್ರ ಯಾವೊಂದು ತಾಲೂಕಿಗೆ ಭೇಟಿ ನೀಡಿ ರೈತರ ಗೋಳು ಕೇಳಿಲ್ಲ ಅವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ ಕಾಲಿಗೆ ಕೆಸರು ಹತ್ತಲಿದೆ ಎಂದು ತಿಳಿದುಕೊಂಡು ಸಿಎಂ ಅವರನ್ನು ಕರೆಯಿಸಿ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಿಯಾಂಕ್ ಖರ್ಗೆ ಜಿಲ್ಲೆಗೆ ಹೆಚ್ಚು ಪರಿಹಾರ ಬಂದಿದೆ ಎಂದು ಹೇಳಿದ್ದಾರೆ ಆದರೆ ಇಲ್ಲಿವರೆಗೆ ರೈತರ ಖಾತೆಗೆ ಬೆಳೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.

224 ಕ್ಷೇತ್ರಗಳಲ್ಲಿ ರೈತಪರ ಹೋರಾಟ ಮಾಡಲು ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಅದರಂತೆ ಡಿಸೆಂಬರ್ 1 ರಿಂದ 3 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ, ಡಿ. 2 ರಂದು ಕಲಬುರಗಿಗೆ ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಮತದಾರರ ಪಟ್ಟಿಯಿಂದ ನಿಜವಾದ ಮತದಾರರು ಹೊರಗಿಬಾರದು ಕೊಟ್ಟಿ ಮತದಾರರನ್ನು ಹೊರಗಿಡಬೇಕು ಎನ್ನುವುದು ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಉದ್ದೇಶವಾಗಿದೆ ಎಂದು ಹೇಳಿದರು. ಕ್ಷೇತ್ರದ ಒಟ್ಟು 257 ಮತಗಟ್ಟೆಗಳಿಗೆ ಬಿಎಲ್ಎ 2 (ಭೂತ್ ಲೆವೆಲ್ ಏಜೆಂಟ್) ಗಳನ್ನು ನೇಮಿಸಲಾಗಿದೆ ಇವರ ಮೇಲೆ ಬಿಎಲ್ಎ 1 ಆಗಿ ಬಸವರಾಜ ಬೆಣ್ಣೂರಕರ್ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಕ್ಷೇತ್ರದ ಎಲ್ಲಾ ಬಿಎಲ್ಎ ಗಳು ಎಸ್ಐಆರ್ ಅನ್ನು ಚಾಲೆಂಜ್ ಆಗಿ ತೆಗೆದುಕೊಂಡು ಬರುವ 30 ದಿನಗಳಲ್ಲಿ ಪ್ರತಿ ಮನೆಗೆ ಭೇಟಿ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿದರು, ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಹಿಳಾ ಅಧ್ಯಕ್ಷೆ ನಾಗುಬಾಯಿ ಜಿತುರೆ, ಪುರಸಭೆ ಮಾಜಿ ಸದಸ್ಯ ರಮೇಶ್ ಬೊಮ್ಮನಳ್ಳಿ, ಆಣವೀರಪ್ಪ ತೆಂಗಳಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಹೇಂದ್ರ ಕೋರಿ, ಮಲ್ಲಿಕಾರ್ಜುನ ಅಲ್ಲೂರಕರ್, ಶಿವರಾಮ ಚವ್ಹಾಣ, ಶಾಂತಕುಮಾರ್ ಮಳಖೇಡ, ಮಹೇಶ್ ಬಾಳಿ, ಕೋಟೇಶ್ವರ ರೇಷ್ಮಿ, ಬಸವರಾಜ ಭೀಮನಳ್ಳಿ ಗುಂಡುಗೌಡ ಇಂಗಳಗಿ, ಸಾಬಣ್ಣ ಜಾಲಗಾರ, ದುರ್ಗಪ್ಪ ಯಾಗಾಪೂರ, ಸಿದ್ರಾಮೇಶ್ವರ ರೇಷ್ಮಿ ಸೇರಿದಂತೆ ಅನೇಕರು ಇದ್ದರು.

ಬಿಎಲ್ಎ 1 ಬಸವರಾಜ ಬೆಣ್ಣೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಲ್ಲಿಕಾರ್ಜುನ ಇಟಗಿ ಸ್ವಾಗತಿಸಿದರು, ನಾಗರಾಜ ಹೂಗಾರ ನಿರೂಪಿಸಿದರು, ವೀರಣ್ಣ ಯಾರಿ ವಂದಿಸಿದರು.

“ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಚಿತ್ತಾಪುರ ಸಾಮಾನ್ಯ ಕ್ಷೇತ್ರವಾದರೆ ನಾನು ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ, ಮುಂದಿನ ಚುನಾವಣೆಯಲ್ಲಿ ಚಿತ್ತಾಪುರಕ್ಕೆ ಮುಕ್ತಿ ಸಿಗಲಿದೆ”.-ರಾಜಕುಮಾರ್ ಪಾಟೀಲ ತೇಲ್ಕೂರ್ ಮಾಜಿ ಶಾಸಕರು ಸೇಡಂ.

Spread the love

Leave a Reply

Your email address will not be published. Required fields are marked *

error: Content is protected !!