Oplus_0

ಚಿತ್ತಾಪುರ ಹಜರತ್ ಚಿತ್ತಾಷಹಾವಲಿ ದರ್ಗಾದ 799 ನೇ ಜಾತ್ರಾ ಮಹೋತ್ಸವ (ಉರುಸ್) ಮೇ.9 ರಿಂದ ಪ್ರಾರಂಭ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸೂಫಿ ಸಂತ ಹಜರತ್ ಚಿತ್ತಾಷಹಾವಲಿ ದರ್ಗಾದ 799 ನೇ ಜಾತ್ರಾ ಮಹೋತ್ಸವ (ಉರುಸ್) ಮೇ.9 ರಿಂದ ಪ್ರಾರಂಭವಾಗಲಿದೆ ಎಂದು ದರ್ಗಾದ ಮುತ್ತುವಲ್ಲಿ ಸೈಯದ್ ಮಿನಾಜುದ್ದೀನ್ ಚಿಸ್ತಿ ತಿಳಿಸಿದ್ದಾರೆ.

ಮೇ.9 ರಂದು ಶನಿವಾರ ಮುಂಜಾನೆ 10 ಘಂಟೆಗೆ ಪಟ್ಟಣದ ಹಿಂದೂ ಧರ್ಮದ ನಾಗಣ್ಣ ಮಾಸ್ಟರ್ ಬಳ್ಳಾ ಮನೆಯಲ್ಲಿ ಗಲಾಫ್ ಫಾತೇಹಾ ಜರುಗುವ ಮೂಲಕ ಶುಭಾರಂಭಗೊಳ್ಳುವುದು. ಇದರಲ್ಲಿ ಸರ್ವಧರ್ಮೀಯರು, ಗಣ್ಯವ್ಯಕ್ತಿಗಳು ಮೌಲ್ವಿಗಳು, ಜಂಗಮರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಅಪರಾಹ್ನ ಸೂಫಿ ಸಂತರ ಭಕ್ತರಾದ ಚೂರಿ, ಬಾಬುಳಗಿ, ಪಬ್ಬಣಿ, ವಸ್ತ್ರದ, ಮನೆಯವರಿಂದ ವಿವಿಧ ಧಾನ್ಯಗಳನ್ನು ಜೋಳಿಗೆಯಲ್ಲಿ ತಂದು ಪೂಜೆ ಸಲ್ಲಿಸಿ ಚಿತ್ತಾಷಹಾವಲಿ ಕುಳಿತ ಸ್ಥಳಕ್ಕೆ ಮತ್ತು ಗಲಾಫ್ ಗೆ ಪ್ರಾರ್ಥನೆ ಸಲ್ಲಿಸಿ, ನಂತರ ಮಾಲದಿ ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ 9.30 ಘಂಟೆಗೆ ಬಳ್ಳಾ ಅವರ ಮನೆಯಿಂದ ಗಲಾಫ್ ಮೆರವಣಿಗೆಯು ಹೊರಟು ದರ್ಗಾದ ಮುತ್ತುವಲ್ಲಿ ಮತ್ತು ಸಜ್ಜಾದ ಸೈಯದ್ ಮಿನಾಜುದ್ದೀನ್ ಚಿಸ್ತಿ ಮನೆ ತಲುಪುವುದು. ಅಲ್ಲಿಂದ ರಾತ್ರಿ 10 ಘಂಟೆಗೆ ಸಂದಲ್ ಷರೀಫ್ ಫಾತೇಹಾ ಮೂಲಕ ಸಂದಲ್ (ಗಂಧ) ಮೆರವಣಿಗೆಯು ಚಾಲನೆಗೊಳ್ಳುವುದು. ಸಂದಲ್ ಹೊರಟ ಮೇಲೇನೆ ಬಹಳಷ್ಟು ಭಕ್ತಾದಿಗಳು ತಮ್ಮ ಉಪವಾಸ ಬಿಡುವರು.

ಸಂದಲ್ ಮೆರವಣಿಗೆಯಲ್ಲಿ ಗಲಾಫ್ ಹೊತ್ತ ಕುದರೆ, ದರ್ಗಾಕ್ಕೆ ಹೊದಿಸುವ ಚಾಂದನಿ ಹೊತ್ತ ಒಂಟೆಗಳು, ಶೆಹನಾಯಿ ಮತ್ತು ನಗಾರಿ ವಾದಕರು, ಮೌಲ್ವಿಗಳ ಭಕ್ತಿಗಾಯನ ಡಬಲಿ ಬಾರಿಸುತ್ತ, ವಿವಿಧ ವಾದ್ಯಗಳು, ಯುವಕರ ಸಾಹಸಮಯ ಮಲ್ಲಗಂಭ, ನಾನಾ ಬಡಾವಣೆಗಳಿಂದ ಆಗಮಿಸಿ ತಮ್ಮ ತಮ್ಮ ತಂಡದ ಪರವಾಗಿ ಸಮಾನ ರಂಗಿನ ಧಿರಿಸು ಧರಿಸಿ ಫೆರಪಟ್ಟಿ ಆಡುವುದು ಮುಂತಾದ ಆಕರ್ಷಣೆಗಳು ಇರುತ್ತವೆ.

ಸಂದಲ್ ಹೊರಡುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾಯಿದು ಕೂಡುವುದು, ಅಂಗಡಿಗಳ ಮೇಲೆ ಜಗಮಗಿಸುವ ವಿದ್ಯುತ್ ಅಲಂಕಾರ, ಚಿಕ್ಕವರು ದೊಡ್ಡವರೆನ್ನದೆ, ಮಹಿಳೆಯರು ಕೂಡ ಸಂದಲ್ ಮೆರವಣಿಗೆಯ ದರುಶನ ಮಾಡುವರು.

ಗಂಧದ ಮೆರವಣಿಗೆಯು ಭುವನೇಶ್ವರಿ ವೃತ್ತ, ಜನತಾ ವೃತ್ತ, ಕಪ್ಪಡ ಬಜಾರ್, ಚಿತ್ತಾವಲಿ ವೃತ್ತ, ಬಾಹರಪೇಟ್ ಮುಖಾಂತರ ಮಾರನೇ ದಿನ ನಸುಕಿನ ಜಾವ ದರ್ಗಾ ತಲುಪಲಿದೆ ಮತ್ತು ಅಲ್ಲಿ ಗುರುಗಳಾದ ಪೀರಖಾದರಿ ಸಮಾಧಿಗೆ ಹಾಗೂ ಸೂಫಿ ಸಂತ ಹಜರತ್ ಚಿತ್ತಾಷಹಾವಲಿ ಸಮಾಧಿಗೆ ಹೂವುಗಳ ಸುರಿಮಳೆಯಲ್ಲಿ ಗಂಧಲೇಪನ ಮತ್ತು ಗಲಾಫ್ ಹೊದಿಕೆ, ಫಾತೇಹಾ ಮೂಲಕ ಅರ್ಪಣೆಗೊಳ್ಳುವುದು, ನಂತರ ಚಾಜದ ರೂಪದಲ್ಲಿ ಮುತ್ತುವಲ್ಲಿ ಅವರಿಗೆ, ಗಂಧ ಹೊತ್ತವರು, ದರ್ಗಾದ ಪೂಜಾರಿಗಳು ಮುಜಾವರಗಳು, ಕುದರೆ ಸೇವೆ ಮಾಡುವವರು, ಮೌಲಾನಗಳಿಗೆ, ಖಾಜಿಸಾಹೇಬ ಅವರುಗಳಿಗೆ ಪ್ರಸಾದ ರೂಪದಲ್ಲಿ ಬಹು ಪಾವಿತ್ರತೆವುಳ್ಳ ತಬರುಕ್ ವಿತರಿಸಲಾಗುವುದು, ಗಂಧಲೇಪನ ನಡೆದ ನಂತರ ಭಕ್ತರು ಸೂಫಿ ಸಂತರಿಗೆ ಪ್ರಿಯವಾದ ಮಾಲದಿ, ಹೂವು, ತೆಂಗಿನಕಾಯಿ, ಅರ್ಪಿಸುವರು.

ಮೇ. 10 ರಂದು ದೀಪೋತ್ಸವ (ಚಿರಾಗ್): 

ದರ್ಗಾ ಆವರಣದಲ್ಲಿ ರಾತ್ರಿ ಮಿರಾಮ್ (ಮಾಡಗಳಲ್ಲಿ) ಸಾವಿರಾರು ದೀಪಗಳು ಪ್ರಜ್ವಲಿಸತ್ತವೆ, ಭಕ್ತರು ಹರಕೆಯನುಸಾರ ದೀಪ ಬೆಳಗಿಸುವರು, ನೋಡುಗರ ನಯನಕ್ಕೆ ಸೆಳೆತ ಹೃದಯಕ್ಕೆ ಅನುಭೂತಿ ನೀಡುವುದು, ನಂತರ 10 ಘಂಟೆಗೆ ಖ್ಯಾತ ಕಲಾವಿದರಿಂದ ಖವ್ಹಾಲಿ ಮತ್ತು ಗೀ ಗೀ ಪದಗಳು ನಡೆಯುವವು.

ಮೇ.11 ರಂದು ಖವ್ಹಾಲಿ ಮತ್ತು ಗೀಗೀ ಪದಗಳ ಸಂಭ್ರಮ:

ಮೂರನೇ ದಿನ ರಾತ್ರಿ 10 ಗಂಟೆಗೆ ಖ್ಯಾತ ಕಲಾವಿದರಿಂದ ಖವ್ಹಾಲಿ ಮತ್ತು ಗೀ ಗೀ ಪದಗಳು ನಡೆಯುವವು. ಭಕ್ತಾದಿಗಳು ಉತ್ಸಾಹದಿಂದ ಭಾಗವಹಿಸುತ್ತಾರೆ.

ಜಾತ್ರೆಯ ರಂಗು ಹೆಚ್ಚಿಸುವ ಜೋಕಾಲಿಗಳು:

ಮಕ್ಕಳ ಮನೋರಂಜನೆಗಾಗಿ ವಿವಿಧ ಆಟಿಕೆಗಳ ಅಂಗಡಿ, ಎತ್ತರದ ಜೋಕಾಲಿಗಳು, ಅಜಮೀರಿನ ಸಿಹಿಯಾದ ಭಕ್ಷ್ಯಗಳು, ರಾಜಸ್ತಾನಿಯವರ ಕರಕುಶಲತೆಯ ಮಳಿಗೆಗಳು, ದೆಹಲಿಯ ಪಿಂಗಾಣಿ ಸಾಮಗ್ರಿಗಳು, ಅಜಮೀರಿನ ರಾಶಿಫಲದ ಹರಳುಗಳು, ಮಹಿಳೆಯರಿಗಾಗಿ ಬಣಬಣ್ಣದ ಬಳೆಗಳ ಅಂಗಡಿಗಳು, ಸೌಂದರ್ಯ ಸಾಧನದ ಅಂಗಡಿಗಳು, ಫಲಹಾರದ ಟೆಂಟ್, ಅಂಗಡಿಗಳು, ಯುವಕರಿಗಾಗಿ ಬ್ರೇಕ್ ಡಾನ್ಸ್ ತೊಟ್ಟಿಲು, ಪಟ್ಟಣದ ಬೆಲ್ಲದ ಜಿಲೇಬಿ ಮುಂತಾದವುಗಳು ಮನ ಸೂರೆಗೊಳಿಸುವವು.

ಮೂರು ದಿನಗಳವರೆಗೆ ನಡೆಯುವ ಜಾತ್ರೆಯಲ್ಲಿ ಪಟ್ಟಣ ಸೇರಿದಂತೆ ವಿವಿಧ ಹಳ್ಳಿಗಳಿಂದ ಮತ್ತು ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸುವರು ಎಂದು ದರ್ಗಾದ ಮುತ್ತುವಲ್ಲಿ ಮಿನಾಜುದ್ದೀನ್ ಚಿಸ್ತಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!