ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜೂನ್.30 ಕ್ಕೆ, ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ | ಸಚಿವ ಪ್ರಿಯಾಂಕ್ ಖರ್ಗೆ ಅವರ ಕೃಪಾಶೀರ್ವಾದ ಯಾರ ಮೇಲೆ ಆಗಲಿದೆ ?
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜೂನ್.30 ರಂದು ನಿಗದಿಯಾಗಿದ್ದು ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕೃಪಾಶೀರ್ವಾದ ಯಾರ ಮೇಲೆ ಆಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಈಗಾಗಲೇ ಆಕಾಂಕ್ಷಿಗಳು ತಮ್ಮ ಗಾಡ್ ಫಾದರಗಳ ಹಾಗೂ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಒತ್ತಡ ಹೇರಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಮೀಸಲಾತಿ ಇಲ್ಲದೇ ಇರುವುದರಿಂದ ಯಾವ ವರ್ಗದವರಾದರೂ ಸ್ಪರ್ಧೆ ಮಾಡಲು ಅವಕಾಶ ಇರುವುದರಿಂದ ಅನೇಕ ಆಕಾಂಕ್ಷಿಗಳು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸ್ಥಾನಗಳ ಬಲಾಬಲ: ಪಿಎಲ್‌ಡಿ ಬ್ಯಾಂಕ್‌ನ ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 11 ಹಾಗೂ 3 ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಕಾಂಗ್ರೆಸ್ ಬೆಂಬಲಿತರೇ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ ಹೀಗಾಗಿ ಸಹಜವಾಗಿಯೇ ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಅಳ್ಳೋಳ್ಳಿ ಸಾಲಗಾರರ ಕ್ಷೇತ್ರದ ಭೀಮಣ್ಣ ಸಾಲಿ, ಚಿತ್ತಾಪುರ ಸಾಲಗಾರರ ಕ್ಷೇತ್ರದ ಅಣ್ಣಾರಾವ ಪಾಟೀಲ್ ಮುಡಬೂಳ, ಗುಂಡಗುರ್ತಿ ಕ್ಷೇತ್ರದ ಸುನೀಲ್ ದೊಡ್ಡಮನಿ, ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದ ವೀರುಪಾಕ್ಷಪ್ಪ ಗಡ್ಡದ್ ಅವರಲ್ಲಿ ತೀವ್ರ ಪೈಪೋಟಿ ನಡೆದಿದೆ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಆಕಾಂಕ್ಷಿಗಳ ಹೆಸರು ಕೇಳಿ ಬಂದಿಲ್ಲ.

