ಚಿತ್ತಾಪುರ ಆರ್.ಎಸ್.ಎಸ್ ಪಥಸಂಚಲನಕ್ಕೆ ಭವ್ಯ ಸ್ವಾಗತ | ಪೊಲೀಸ್ ಸರ್ಪಗಾವಲು, ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಯಶಸ್ವಿಗೊಂಡ ಪಥಸಂಚಲನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಕೆಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿದ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ನಡೆದ ಪಥಸಂಚಲನ ಪೊಲೀಸ್ ಸರ್ಪಗಾವಲು, ಸಿಸಿ ಕ್ಯಾಮೆರಾ ಹಾಗೂ ಡ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಯಶಸ್ವಿಗೊಂಡಿತ್ತು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಆರ್.ಎಸ್.ಎಸ್ ಪಥಸಂಚಲನ ಬಸ್ ನಿಲ್ದಾಣ ರಸ್ತೆ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ್, ತಾಲೂಕು ಪಂಚಾಯತ್ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ವೃತ್ತದಿಂದ ಮರಳಿ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತ್ತು.

ಪಥ ಸಂಚಲನದ ಮಾರ್ಗದುದ್ದಕ್ಕೂ ರಸ್ತೆ ಅಕ್ಕಪಕ್ಕದ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಯುವಕರು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಗಣವೇಷಧಾರಿಗಳಾದ ರಾಷ್ಟ್ರೀಯ ಸ್ವಯಂ ಸೇವಕರ ಮೇಲೆ ಹೂವಿನ ಸುರಿಮಳೆಯೇ ಸೂರಿಯುವ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಭಾರತ್ ಮಾತಾ ಕೀ ಜೈ, ಒಂದೇ ಮಾತರಾಮ್ ಹಾಗೂ ಅಖಂಡ ಭಾರತಕ್ಕೆ ಜೈ ವಾಗಲಿ ಎನ್ನುವ ಘೋಷವಾಕ್ಯಗಳು ಮೊಳಗಿದವು. ಪ್ರಮುಖ ರಸ್ತೆಗಳಲ್ಲಿ ರಂಗೋಲಿಯಿಂದ ಸಿಂಗರಿಸಿದರು ಹಾಗೂ ಕೇಸರಿ ಧ್ವಜಗಳು, ಬಂಟಿಂಗ್ಸ್, ಪರಾರಿ ಹಾಗೂ ಸ್ವಾಗತ ಬ್ಯಾನರ್ ಗಳು ರಾರಾಜಿಸಿದವು. ಭಾರತ್ ಮಾತೆಯ ಮತ್ತು ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಹಾಗೂ ಮಾಧವ್ ಗೋಲ್ವಾಲ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಪಥಸಂಚಲನಕ್ಕೆ ಹೊರಗಿನವರಿಗೆ ಅವಕಾಶ ಇಲ್ಲದೇ ಇರುವುದರಿಂದ ಪಟ್ಟಣದ ಶಹಾಬಾದ ರಸ್ತೆ, ಮಳಖೇಡ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕಿದ್ದು ಎಲ್ಲ ವಾಹನಗಳ ತಪಾಸಣೆಗೆ ಜನರ ವಿಚಾರಣೆ ಕಾರ್ಯ ನಡೆಸಿದ್ದು ಕಂಡುಬಂತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಕಳೆದ ಒಂದು ತಿಂಗಳಿನಿಂದ ಭಾರಿ ಚರ್ಚೆಯಲ್ಲಿದ್ದ ಆರ್.ಎಸ್.ಎಸ್ ಪಥ ಸಂಚಲನ ಕೊನೆಗೂ ಹೈಕೋರ್ಟ್ ಅನುಮತಿ ಮೇರೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ಪ್ರಕಾಶ್ ಯಾತನೂರ, ಪಿಎಸ್ಐ ಮಂಜುನಾಥ ರೆಡ್ಡಿ, ಚೇತನ್ ಪೂಜಾರಿ, ಶ್ರೀಶೈಲ ಅಂಬಾಟಿ, ತಿರುಮಲೇಶ್ ಕುಂಬಾರ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕೆ.ಎಸ್.ಆರ್.ಪಿ, ಡಿಎಆರ್ ಸೇರಿದಂತೆ ಗೃಹ ರಕ್ಷಕರು ಕರ್ತವ್ಯದಲ್ಲಿ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!