Oplus_0

ಚಿತ್ತಾಪುರ ಆರ್.ಎಸ್.ಎಸ್ ಶತಾಬ್ದಿ ಹಾಗೂ ವಿಜಯ ದಶಮಿಯ ಉತ್ಸವದ ಸಮಾರಂಭ | ಅಸಂಘಟಿತ ಹಿಂದುಗಳನ್ನು ಸಂಘಟಿತರನ್ನಾಗಿ ಮಾಡಿರುವುದು ಸಂಘ: ಕೃಷ್ಣಾಜೀ ಜೋಶಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಆರ್.ಎಸ್.ಎಸ್ ಪಥಸಂಚಲನ, ಸಂಚಲನ ಮೂಡಿಸಿದೆ. 1925 ರಲ್ಲಿ ಡಾ.ಹೆಡ್ಗೆವಾರ್ ಅವರು ನಾಗಪುರದಲ್ಲಿ 17 ಜನರಿಂದ ಪ್ರಾರಂಭಿಸಿದ ಆರ್.ಎಸ್.ಎಸ್ ಸಂಘಟನೆ 100 ವರ್ಷ ಪೂರೈಸಿದ್ದು ಇಂದು ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದೆ. ಸಮಾಜದ ಬದಲಾವಣೆಗೆ ಸಾಕಷ್ಟು ಪ್ರಯತ್ನ ಮಾಡಿದೆ ಆದರೆ ಅನೇಕರು ಸಂಘ ಏನು ಕೆಲಸ ಮಾಡಿದೆ ಅಂತ ಪ್ರಶ್ನೆ ಮಾಡ್ತಾರೆ ಅಸಂಘಟಿತ ಹಿಂದುಗಳನ್ನು ಸಂಘಟಿತರನ್ನಾಗಿ ಮಾಡಿರುವುದು, ಹಿಂದುಗಳಲ್ಲಿ ಹಿಂದುತ್ವವನ್ನು ತಂದಿರುವುದು, ಸಾಮಾನ್ಯರನ್ನು ಅಸಾಮಾನ್ಯರಾಗಿ ಮಾಡಿರುವುದು ಸಂಘ ಎಂದು ಪ್ರಾಂತ ಪ್ರಚಾರಕ ಪ್ರಮುಖ ಕೃಷ್ಣಾಜೀ ಜೋಶಿ ಉತ್ತರಿಸಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಾಗೂ ವಿಜಯ ದಶಮಿಯ ಉತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ಹಾಗೂ ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಸಂಘ ಮುಂಚೂಣಿಯಲ್ಲಿ ಇರಲಿದೆ. 1985 ರಿಂದ ಪ್ರಾರಂಭವಾದ ಹೋರಾಟ ಅಯೋಧ್ಯೆ ರಾಮಮಂದಿರ ನಿರ್ಮಾಣ ಇಂದು ಸಾಕಾರಗೊಂಡಿದೆ. ನಾನು ಹಿಂದು ಎಂದು ಗರ್ವದಿಂದ ಹೇಳುತ್ತೇನೆ, ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಹೇಳುತ್ತಿರುವುದು ಸಂಘದ 100 ವರ್ಷದ ಶಪಥವಾಗಿದೆ ಎಂದು ಹೇಳಿದರು. ಶೈಕ್ಷಣಿಕ, ವೈಚಾರಿಕ, ಸ್ವದೇಶಿ, ಪರಿಸರ, ಕುಟುಂಬ ಮೌಲ್ಯ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯ ಕೈಗೊಂಡಿದೆ. ದೇಶವನ್ನು ಬಿಟ್ಟು ಹೋಗುವ ಅಸ್ಸಾಂ, ಮಣಿಪುರ, ಮೇಘಾಲಯ ಪ್ರದೇಶವನ್ನು ಉಳಿಸಿಕೊಳ್ಳುವ ಕೆಲಸ ಸಂಘ ಮಾಡಿದೆ ಎಂದು ಉತ್ತರ ನೀಡಿದರು. ಸಂಘದ ಕಾರ್ಯಚಟುವಟಿಕೆಗಳು ನೋಡಲು ಶಾಖೆಗೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರು ಭೇಟಿ ನೀಡಿದ್ದರು ಎಂದು ಸ್ಮರಿಸಿದರು.

ಯಾವುದೇ ಜಾತಿ ಮತ ಪಂಥ ಎನ್ನದೆ ನಾವೆಲ್ಲರೂ ಒಂದೇ ಎನ್ನುವ ಭಾವ ಇಟ್ಟುಕೊಂಡು ಸಂಘ ಕೆಲಸ ಮಾಡುತ್ತಿದೆ, ದೇಶದ 70 ಸಾವಿರ ಹಳ್ಳಿಗಳಲ್ಲಿ ಸಂಘದ ಶಾಖೆಗಳಿವೆ, 3700 ಪ್ರಚಾರಕರು ಇದ್ದಾರೆ, 6.50 ಲಕ್ಷ ಹಳ್ಳಿಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ. 6 ಸಂಕುಲಗಳಾಗಿ 36 ಸಂಘಟನೆಗಳು ಕೆಲಸ ಮಾಡುತ್ತಿವೆ, ಜಗತ್ತಿನ 40 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ ಎಂದರು. ಸಂಘದಲ್ಲಿ ಯಾವುದೇ ಒಡಕು ಇಲ್ಲದೆ ಎಲ್ಲರೂ ಭಾರತ್ ಮಾತೆಯ ಮಕ್ಕಳಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಸಂಘ ಯಾರ ವಿರುದ್ಧವೂ ಅಲ್ಲ, ಭಾರತ ಒಡೆಯಲು ಯತ್ನಿಸುವವರು ಮಾತ್ರ ನಮ್ಮ ವಿರೋಧಿಗಳು ಎಂದ ಅವರು, ಸಂಘದ ಇಚ್ಛೆ ಎಲ್ಲರನ್ನೂ ತೆಗೆದುಕೊಂಡು ಹೋಗುವುದಾಗಿದೆ, ನಮ್ಮನ್ನು ಟೀಕೆ ಟಿಪ್ಪಣಿ ಮಾಡುವವರನ್ನು ಭೇಟಿ ಮಾಡಿ ಇಂದಲ್ಲ 10 ವರ್ಷದಲ್ಲಿ ಹಿಂದುತ್ವದ ಪ್ರವಾಹದಲ್ಲಿ ತೆಗೆದುಕೊಂಡು ಹೋಗಲಾಗುವುದು ಯಾರನ್ನೂ ಬೀಡುವುದಿಲ್ಲ ಎಂದರು. ಸಂಘದ ವಿಜಯ ಎಂದರೆ ಅದು ದೇಶದ ವಿಜಯ ಇದ್ದಂತೆ ಇನ್ನೂ ಹಿಂದುತ್ವದ ಸಂಘಟನೆಗೆ ಹೆಚ್ಚು ವೇಗ ನೀಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಭೀಮರೆಡ್ಡಿ ಕುರಾಳ ಮಾತನಾಡಿ, ಕೋರ್ಟ್ ಅನುಮತಿ ಪಡೆದು ಆರ್.ಎಸ್.ಎಸ್ ಪಥಸಂಚಲನ ಮಾಡುತ್ತಿರುವುದು ದೇಶದಲ್ಲಿಯೇ ಇದೇ ಮೊದಲು ಅನ್ಸುತ್ತೆ ಇದರಿಂದ ಚಿತ್ತಾಪುರ ಎಲ್ಲಿದೆ ಅಂತ ಗೊತ್ತಾಯ್ತು. ನಾವೆಲ್ಲ ಭಾರತೀಯರು, ನಾವೆಲ್ಲ ಹಿಂದುಗಳು ಎನ್ನುವ ಭಾವ ಎಲ್ಲರಲ್ಲೂ ಬರುವವರೆಗೆ ಸಂಘದ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವರಾಜ ಬೆಣ್ಣೂರಕರ್, ವಿಠಲ್ ನಾಯಕ, ಚಂದ್ರಶೇಖರ ಅವಂಟಿ, ಮಲ್ಲಿಕಾರ್ಜುನ ಎಮ್ಮೆನೋರ್, ಆನಂದ ಪಾಟೀಲ ನರಿಬೋಳ, ಅಶೋಕ ನಿಪ್ಪಾಣಿ, ರಾಮರೆಡ್ಡಿ ಕೊಳ್ಳಿ, ಕೋಟೇಶ್ವರ ರೇಷ್ಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅನೀಲ್ ಪಂಚಾಳ ಸ್ವಾಗತಿಸಿದರು, ಗುರುರಾಜ್ ತಿಪ್ಪಶೆಟ್ಟಿ ಗೀತೆ ಹಾಡಿದರು. ಸಂತೋಷ ಹಾವೇರಿ ನಿರೂಪಿಸಿದರು, ಪ್ರಲ್ಹಾದ ವಿಶ್ವಕರ್ಮ ವಂದಿಸಿದರು. ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

“ಆರ್.ಎಸ್.ಎಸ್ ಶಾಖೆಗೆ ಬರುವವರನ್ನು ಕೇವಲ ಹೆಸರು ಮತ್ತು ವಿಳಾಸ ಕೇಳುತ್ತೇವೆ ಹೊರತು ಜಾತಿ ಯಾವುದೆಂದು ಕೇಳುವುದಿಲ್ಲ. ಬವವಣ್ಣನವರ ಇವನಾರವ ಇವನಾರವ ಇವ ನಮ್ಮವ ವಚನ ಪಾಲನೆ ಮಾಡುತ್ತೇವೆ. ಆರ್.ಎಸ್.ಎಸ್ ಜಿಂದಾಬಾದ್ ಎನ್ನುವುದಿಲ್ಲ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾರೆ”.-ಕೃಷ್ಣಾಜೀ ಜೋಶಿ ಪ್ರಾಂತ ಪ್ರಚಾರಕರು.

Spread the love

Leave a Reply

Your email address will not be published. Required fields are marked *

error: Content is protected !!