Oplus_0

ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ  ಹೈಕೋರ್ಟ್‌ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.

ನವೆಂಬರ್ 16ರ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ತನಕ ಗಣವೇಷಧಾರಿಗಳ ಪಥಸಂಚಲನಕ್ಕೆ ಹೈಕೋರ್ಟ್ ಅವಕಾಶ ನೀಡಿದೆ.

ಈ ಸಂಬಂಧ ಗುರುವಾರ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ಪಥಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳು ಹಾಗೂ 50 ಮಂದಿ ಘೋಷ್ ವೃಂದಕ್ಕೆ ಅವಕಾಶ ನೀಡಲಾಗಿದೆ ಎಂದು ಆದೇಶ ನೀಡಿ ಅರ್ಜಿ ಇತ್ಯರ್ಥಗೊಳಿಸಿದರು.

ಕಳೆದ ಅಕ್ಟೋಬರ್ 19ರಂದು ಚಿತ್ತಾಪುರದಲ್ಲಿ ಆರ್.ಎಸ್.ಎಸ್‌ ಪಥಸಂಚಲನ ನಡೆಸಲು ಅನುಮತಿ ಕೋರಿತ್ತು. ಆದರೆ, ಚಿತ್ತಾಪುರ ತಹಸೀಲ್ದಾರ್ ಕಾನೂನು ಸುವ್ಯವಸ್ಥೆ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೊರೆಹೋಗಿದ್ದರು.

ಆರ್.ಎಸ್.ಎಸ್ ಎಂಬ ಸಂಘಟನೆಗೆ ಸತ್ಯದ ಅರಿವಾಗಿದೆ: ಪ್ರಿಯಾಂಕ್ ಖರ್ಗೆ

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ! ಆರ್.ಎಸ್.ಎಸ್ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ ಆರ್.ಎಸ್.ಎಸ್ ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ. ಯಾವುದೇ ಸಂಘಗಳು, ವ್ಯಕ್ತಿಗಳು ಇದನ್ನು ಅರ್ಥೈಸಿಕೊಂಡು ನೀತಿ, ನಿಯಮಗಳಿಗೆ ಬದ್ಧರಾಗಿ ನಡೆಯಬೇಕು.

ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತ ರೂಪಿಸಿರುವ ಮಾನದಂಡಗಳನ್ನು ಒಪ್ಪಿ, ನಿಯಮಗಳಿಗೆ ಅನುಸಾರವಾಗಿ ಆರ್.ಎಸ್.ಎಸ್ ತಮ್ಮ ಕಾರ್ಯಕ್ರಮ ನಡೆಸಬೇಕು ಇದರ ಹೊರತಾಗಿ ಯಾವುದೇ ಅತಿ ಬುದ್ದಿವಂತಿಕೆಗೂ ಅವಕಾಶವಿಲ್ಲ.

300 ಜನರು ಮಾತ್ರ ಭಾಗವಹಿಸಬೇಕು, ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅವಕಾಶ, ಚಿತ್ತಾಪುರದ ಹೊರಗಿನವರು ಭಾಗಿಯಾಗುವಂತಿಲ್ಲ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವಂತಿಲ್ಲ.

ಈ ನಿಯಮಗಳ ಮೂಲಕ ಸರ್ಕಾರ ತೋರಿದ ಉದಾರತೆಯನ್ನು, ಕಲಬುರಗಿ ಜಿಲ್ಲಾಡಳಿತ ತೋರಿದ ಸಹನೆಯನ್ನು ಗೌರವಿಸಿ ತಮ್ಮ ಕಾರ್ಯಕ್ರಮವನ್ನು ಪೂರೈಸಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!