ಶ್ರೀ ಸಿಮೆಂಟ್ ರೈಲ್ವೆ ಟ್ರ್ಯಾಕ್ ಕಾಮಗಾರಿ | ಅಕ್ರಮ ಮುರುಮ್, ಸುಣ್ಣದ ಕಲ್ಲು ಸಾಗಣೆ ತಡೆಹಿಡಿಯದಿದ್ದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ: ಮಣಿಕಂಠ ರಾಠೋಡ ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕರದಾಳ ರಸ್ತೆಯಲ್ಲಿ ನಡೆಯುತ್ತಿರುವ ಶ್ರೀ ಸಿಮೆಂಟ್ ರೈಲ್ವೆ ಟ್ರ್ಯಾಕ್ ಕಾಮಗಾರಿಗೆ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಟಿಪ್ಪರ್ ಗಳ ಮೂಲಕ ಸಾಗಣೆ ಮಾಡುತ್ತಿದ್ದ ಮುರುಮ್, ಸುಣ್ಣದ ಕಲ್ಲು ಚಿಂಪು ತಡೆಹಿಡಿಯಬೇಕು, ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಇಲ್ಲದಿದ್ದರೆ ಒಂದು ವಾರದೊಳಗೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಎಚ್ಚರಿಸಿದರು.
ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಹತ್ತಿರದ ಶ್ರೀ ಸಿಮೆಂಟ್ ಕಂಪನಿಯಿಂದ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ರೈಲ್ವೆ ನಿಲ್ದಾಣದವರೆಗೆ ನಡೆಯುತ್ತಿರುವ ರೈಲ್ವೆ ಟ್ರ್ಯಾಕ್ ಕಾಮಗಾರಿಗೆ ಬೆಳೆಸುತ್ತಿರುವ ಮುರುಮ್ ಹಾಗೂ ಸುಣ್ಣದ ಕಲ್ಲು ಚಿಂಪು ಸಾಗಣೆಗೆ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ನಡೆದಿದೆ ಇದನ್ನು ತಡೆಹಿಡಿಯಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ, ಆರ್.ಟಿ.ಓ, ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ದಿಗ್ಗಾಂವ ರಸ್ತೆ, ಬೊಮ್ಮನಳ್ಳಿ, ಚಿತ್ತಾಪುರದ ಬಾಹರಪೇಟ್ ಮತ್ತು ಕರದಾಳ ಈ ನಾಲ್ಕು ಸ್ಥಳಗಳಿಂದ ದಿನನಿತ್ಯ 200 ಕ್ಕೂ ಅಧಿಕ ಟಿಪ್ಪರ್ ಮುರುಮ್, ಸುಣ್ಣದ ಕಲ್ಲು, ಚಿಂಪು ಸಾಗಣೆ ಮಾಡುತ್ತಿದ್ದಾರೆ. ಇದನ್ನು ತಡೆಹಿಡಿಯಬೇಕಾದ ಅಧಿಕಾರಿಗಳು ಹಣ ಪಾವತಿ ಮಾಡಿ ಪರವಾನಗಿ ಪಡೆದು ಕಟ್ಟಿದ ಬಂಟಿಂಗ್ಸ್, ಪರಾರಿ ರಾತ್ರಿ 3 ಗಂಟೆಗೆ ಬಂದು ತೆಗೆಸಿದ್ದಾರೆ. ಅಧಿಕಾರಿಗಳು ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುವ ಮೂಲಕ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಎನ್ಎ, ಲೀಸ್ ಹಾಗೂ ರಾಯಲ್ಟಿ ಇಲ್ಲದೆ ಕಾನೂನು ಬಾಹಿರವಾಗಿ ನಿಗದಿತ ಭಾರಕ್ಕಿಂತ ಅಧಿಕ ಭಾರದ ಮುರುಮ್ ಹಾಗೂ ಚಿಂಪುಗಳು ತುಂಬಿದ ಟಿಪ್ಪರ್ ಗಳು ಒಡಾಟದಿಂದ ರಸ್ತೆಗಳು ಹಾಳಾಗಿವೆ, ದೊಡ್ಡ ಗಾತ್ರದ ತೆಗ್ಗುಗಳು ಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಹಾಗೂ ರಸ್ತೆ ಅಕ್ಕಪಕ್ಕದ ರೈತರ ಹೊಲದಲ್ಲಿದ್ದ ಬೆಳೆಗಳು ನಾಶವಾಗುತ್ತದೆ ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಯುವ ಅಧ್ಯಕ್ಷ ದೇವರಾಜ್ ತಳವಾರ, ಪುರಸಭೆ ಸದಸ್ಯ ರಮೇಶ್ ಬೊಮ್ಮನಳ್ಳಿ, ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಸೇರಿದಂತೆ ಇತರರು ಇದ್ದರು.

