ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ವಿಶ್ವಕರ್ಮ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶ್ರೀ ವಿಶ್ವಕರ್ಮರ ಭಾವಚಿತ್ರಗಳಿಗೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಿರ್ಧಾರಗಳಿಂದಲೇ ದೇಶದಲ್ಲಿ ಏಕತೆ ಸಾಧ್ಯವಾಯಿತು ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಮೋಚನೆ ದೊರೆಯಿತು ಎಂದು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಜಗತ್ತಿನ ಸೃಷ್ಟಿಯ ಮೂಲ ಕರ್ತರು ವಿಶ್ವಕರ್ಮರು ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಮಾತನಾಡಿ, ನಿಜಾಮನಿಗೆ ಪಾಕಿಸ್ತಾನಕ್ಕೆ ಸೇರುವ ಆಸೆ ಇತ್ತು. ಆದರೆ ಸೇನಾ ಬಲದಿಂದಾಗಿ ಅವನು ಶರಣಾಗಬೇಕಾಯಿತು. ಇತಿಹಾಸದಲ್ಲಿ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಬಿ.ಇ.ಓ ಶಶಿಧರ್ ಬಿರಾದಾರ ಮಾತನಾಡಿ, ಗೋರ್ಟಾ (ಬೀದರ್ ಜಿಲ್ಲೆ) ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ತೀವ್ರ ಹೋರಾಟಗಳ ಬಗ್ಗೆ ವಿವರಿಸಿದರು.
ಉಪನ್ಯಾಸ ನೀಡಿದ ಡಾ. ಕೈಲಾಸಪತಿ ವಿಶ್ವಕರ್ಮ, “ವಿಶ್ವಕರ್ಮರು ಎಲ್ಲಾ ಧರ್ಮದವರಿಗೂ ಬೇಕಾದವರು. ದೇಶದ ಆರ್ಥಿಕತೆಗೆ ನಮ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮದ ಎಲ್ಲಾ ಒಳಪಂಗಡಗಳು ಒಂದಾಗಬೇಕು. ಯಂತ್ರಗಳ ಆಗಮನದಿಂದ ಸಂಕಷ್ಟದಲ್ಲಿರುವ ನಮ್ಮ ಜನರಿಗೆ ಅಧಿಕಾರಿಗಳು ಮತ್ತು ಪೊಲೀಸರಿಂದ ಅನ್ಯಾಯವಾಗದಿರಲಿ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಹ್ಲಾದ್ ವಿಶ್ವಕರ್ಮ ಮಾತನಾಡಿ, ನಮ್ಮ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ದಶಕಗಳಿಂದಲೂ ಕೇಳುತ್ತಿದ್ದೇವೆ. ಆದರೆ ಇದುವರೆಗೆ ಶಾಸಕರು ಸ್ಪಂದಿಸಿಲ್ಲ. ತಹಸೀಲ್ದಾರ್ ಮುಖಾಂತರ ಮತ್ತೆ ವಿನಮ್ರವಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಗರಿಕರನ್ನು ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಬಳೂಂಡಗಿ, ತಾಪಂ ಇಒ ಅಕ್ರಮ್ ಪಾಷಾ, ಪುರಸಭೆ ಸದಸ್ಯ ಜಗದೀಶ್ ಚವ್ಹಾಣ, ಬಿಇಒ ಶಶಿಧರ್ ಬಿರಾದಾರ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಮಾಜ ಕಲ್ಯಾಣಾಧಿಕಾರಿ ಚೇತನ ಗುರಿಕಾರ, ರಾಜಣ್ಣ ಕರಾದಾಳ, ಎಂ.ಡಿ. ಸಲೀಂ ಸಾಬ್, ವಿಜಯಕುಮಾರ್ ಬಡಿಗೇರ್, ಬಿಆರ್’ಸಿ ಮಲ್ಲಿಕಾರ್ಜುನ ಸೇಡಂ, ಕೃಷಿ ಅಧಿಕಾರಿ ಸಂಜೀವ ಕುಮಾರ್ ಮಾನಕರ, ಸಿಡಿಪಿಓ ಆರತಿ ತುಪ್ಪದ್, ಸುರೇಶ ವಿಶ್ವಕರ್ಮ, ನಟರಾಜ್ ಶಿಲ್ಪಿ, ರಮೇಶ ಭಕ್ತಿ, ಸತ್ಯನಾರಾಯಣ ಯಾದವ, ತೋಟಗಾರಿಕೆ ಇಲಾಖೆಯ ವೀರಶೆಟ್ಟಿ, ಅಬಕಾರಿ ಸಿಪಿಐ ವನಿತಾ ಸೀತಾಳೆ, ಟಿಪಿಒ ಶಿವಶರಣಪ್ಪ ಮಂಠಾಳೆ, ಕಾಶಿಪತಿ ಬಡಿಗೇರ, ರವಿ ಪಂಚಾಳ, ಶಿವಕುಮಾರ್ ಭಕ್ತಿ, ಮೋನಯ್ಯ ಪಾಂಚಾಳ, ಪ್ರಕಾಶ ತೊನಸನಹಳ್ಳಿ ಸೇರಿದಂತೆ ಇತರರು ಇದ್ದರು. ಪಶು ಇಲಾಖೆಯ ಅಧಿಕಾರಿ ಡಾ. ಶಂಕರ ಕಣ್ಣಿ ನಿರೂಪಿಸಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಸೇವೆ ಮತ್ತು ಕಾರ್ಯಕ್ರಮ ಕ್ಷಮತೆ ಮತ್ತು ಎಲ್ಲರ ಮನ ಗೆದ್ದಿರುವ ಕಾರಣಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಸತ್ಕಾರ ಮಾಡಲಾಯಿತು.

