ಚಿತ್ತಾಪುರದಲ್ಲಿ ಡಿ.22 ರಂದು 21ನೇ ವರ್ಷದ ಮಹಾ ಪಡಿಪೂಜೆ, ವಿಶೇಷ ಪೂಜಾ ಕಾರ್ಯಕ್ರಮ: ಆನಂದ ಗುರುಸ್ವಾಮಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ (ಬಾಲಾಜಿ) ಮಂದಿರದ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಡಿ.22 ರಂದು ಬೆಳಗ್ಗೆ 10 ಗಂಟೆಗೆ ಮಹಾ ಪಡಿಪೂಜೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ (ಅನ್ನದಾನ) ನಡೆಯಲಿದೆ ಎಂದು ಆನಂದ ಗುರುಸ್ವಾಮಿ ಹೇಳಿದರು.
ಪಟ್ಟಣದ ಬಾಲಾಜಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕಾಂತ್ ಲಂಬೋದರಿ ಹೈದರಾಬಾದ್ ಹಾಗೂ ಪಾಂಡುರಂಗ ಗುರುಸ್ವಾಮಿ ಚೆನೈ ಅವರ ನೇತೃತ್ವದಲ್ಲಿ ಮಹಾ ಪಡಿಪೂಜೆ, ಕುಂಕುಮಾರ್ಚನೆ ಹಾಗೂ 18 ಕಳಸಾ ಪೂಜೆ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಕಾರ್ತಿಕ್ ಚಾರಿ ನಾರಾಯಣಪೇಟ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 19 ರಿಂದ ವಿಶೇಷ ಪೂಜೆ ಪ್ರಾರಂಭವಾಗಿದ್ದು ಡಿಸೆಂಬರ್ 30 ರವರೆಗೆ 42 ದಿನಗಳ ಕಾಲ ನಿತ್ಯ ನಸುಕಿನ ಜಾವ 5 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ಪೂಜೆ ನಡೆಯಲಿದೆ ಹಾಗೂ ಬುಧವಾರ ಹಾಗೂ ಶನಿವಾರ ದಿನಗಳಂದು ರಾತ್ರಿ 7.30 ಕ್ಕೆ ಅಭಿಷೇಕ, ಮೆಟ್ಟಿಲು ಪೂಜೆ, ದೇವಿ ಪೂಜೆ ಸೇರಿದಂತೆ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಗುರುಮಠಕಲ್, ಮುಧೋಳ, ಸೇಡಂ, ಶಹಾಬಾದ, ವಾಡಿ, ಕಮಲಾಪುರ ಸೇರಿದಂತೆ ವಿವಿಧೆಡೆಯಿಂದ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಾಗವಹಿಸಲಿದ್ದಾರೆ. ಡಿ.30 ರಂದು ಇರುಮುಡಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ದಾನಿಗಳ ಸಹಕಾರದಿಂದ ನಿತ್ಯ ಧಾರ್ಮಿಕ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ. ಮಹಾ ಪಡಿಪೂಜೆ ಕಾರ್ಯಕ್ರಮ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂದು ಆನಂದ ಗುರುಸ್ವಾಮಿ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಗುರುಸ್ವಾಮಿ, ಸೋಮಶೇಖರ ಗುರುಸ್ವಾಮಿ, ಸಿದ್ದು ಸ್ವಾಮಿ ಗೊಬ್ಬುರ್, ಜಗನ್ನಾಥ ಕಾಶಿ, ಸಂಗಮೇಶ ಪಾಟೀಲ, ಹರ್ಷೀತ್ ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಇದ್ದರು.

