ಚಿತ್ತಾಪುರದಲ್ಲಿ ನಾಳೆ ಶ್ರೀ ರುಕ್ಕಿಣಿ ಪಾಂಡುರಂಗ ಮೂರ್ತಿಯ ಭವ್ಯ ಮೆರವಣಿಗೆ | ಆ.20 ರಂದು ಶ್ರೀ ರುಕ್ಕಿಣಿ ಪಾಂಡುರಂಗ ದೇವಾಲಯ ಉದ್ಘಾಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ವತಿಯಿಂದ ಪಟ್ಟಣದ ಕಂಬಳೇಶ್ವರ ಮಠದ ಹತ್ತಿರ ಆ.20 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ರುಕ್ಕಿಣಿ ಪಾಂಡುರಂಗ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀ ರುಕ್ಕಿಣಿ ಪಾಂಡುರಂಗ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್.ಕೆ ಸಮಾಜದ ತಾಲೂಕು ಅಧ್ಯಕ್ಷ ನರಸೋಬಾ ಬಿ.ತ್ರಿಮಲ್ ತಿಳಿಸಿದ್ದಾರೆ.
ದಂಡೋತಿ ಶ್ರೀ ಬಲಭೀಮೇಶ್ವರ ಸಂಸ್ಥಾನ ಮಠದ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾ, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಕಲಬುರಗಿ ಶ್ರೀ ಗುಂಡೇರಾವ ಮಹಾರಾಜ ಮಠದ ಪೂಜ್ಯ ಶ್ರೀ ಜಯಶ್ರೀ ದಿ. ಶಿವಾಜಿ ಚವ್ಹಾಣ ಅವರು ಸಾನಿಧ್ಯ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು, ಎಸ್.ಎಸ್.ಕೆ. ಸಮಾಜ ಅಧ್ಯಕ್ಷ ನರಸೋಬಾ ಬಿ. ತ್ರಿಮಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಆದಾಯ ತೆರಿಗೆ ಆಯುಕ್ತ ಉಲ್ಲಾಸ ಭೂಜಂಗಸಾ ತ್ರಿಮಲ್, ಹೊಸ ದೆಹಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಎಸ್.ಎಸ್.ಕೆ. ಸಮಾಜ ರಾಜ್ಯಾಧ್ಯಕ್ಷ ಶಶಿಕಾಂತ ಮೇಹರವಾಡೆ, ಎಸ್.ಎಸ್.ಕೆ ಸಮಾಜದ ನ್ಯಾಷನಲ್ ಜನರಲ್ ಸೆಕ್ರೆಟರಿ ರಾಮಚಂದ್ರ ಕಬಾಡಿ, ಉಪಾಧ್ಯಕ್ಷ ಮಾರುತಿರಾವ ಪವಾರ, ರಾಜ್ಯ ಜಂಟಿ ಕಾರ್ಯದರ್ಶಿ ಸಂಜಯ ಮಿಸ್ಕಿನ್, ಜಿಲ್ಲಾಧ್ಯಕ್ಷ ರಾಮ ಪವಾರ, ಮಾಜಿ ಶಾಸಕ ಅಶೋಕ ಕಾಟವೇ, ಸೋಲಾಪುರ ಮಾಜಿ ಶಾಸಕ ನರಸಿಂಗಸಾ ಮೇಂಗಜಿ ಸೇರಿದಂತೆ ಅನೇಕ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಆ.17 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ರುಕ್ಕಿಣಿ ಪಾಂಡುರಂಗ ಮೂರ್ತಿಯ ಭವ್ಯ ಮೆರವಣಿಗೆಯು ಶ್ರೀ ಅಂಬಾಭವಾನಿ ಮಂದಿರದಿಂದ ಗ್ರಾಮ ಪ್ರದಕ್ಷಿಣೆ ಮೂಲಕ ಶ್ರೀ ವಿಠಲ ಮಂದಿರಕ್ಕೆ ತಲುಪುವುದು. ಆ.18 ರಂದು ಬೆಳಗ್ಗೆ 9.10 ಕ್ಕೆ ಗಣೇಶ ಪೂಜಾ, ಪುಣ್ಯಾವಾಚನೆ, ದೇವತಾ ಆಹ್ವಾನ, ಅಗ್ನಿ ಪ್ರತಿಷ್ಠಾಪನೆ ಪೂಜೆ, ಹವನ, ಜಲಾಧಿವಾಸ. ಆ.19 ರಂದು ಬೆಳಗ್ಗೆ 9.10 ಕ್ಕೆ ಪಂಚೋಪಚಾರ ಪೂಜೆ, ವಾಸ್ತು ಹೋಮ, ನವಗ್ರಹ ಹೋಮ, ಮುಖ್ಯ ದೇವತಾ ಹೋಮ, ಶಾಂತಿ ಹೋಮ ಇತ್ಯಾದಿ ಪೂಜೆ ನಡೆಯಲಿದೆ. ಆದ್ದರಿಂದ ಸರ್ವಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

