Oplus_0

ದಂಡೋತಿ ವಸತಿ ಶಾಲೆಗೆ ಬಿಜೆಪಿ ಮುಖಂಡರ ನಿಯೋಗ ಭೇಟಿ | ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಅಮಾನತಿಗೆ ಆಗ್ರಹ  

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಕಳಪೆ ಮಟ್ಟದ ಆಹಾರ ಸರಬರಾಜು ಮಾಡುವವರನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ಆಗ್ರಹಿಸಿದರು.

ತಾಲೂಕಿನ ದಂಡೋತಿ ಗ್ರಾಮದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಬಿಜೆಪಿ ಮುಖಂಡರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಜರುಗಿ ಒಂದು ವಾರವಾದರೂ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿಲ್ಲ, ಇದು ಅವರ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ. ಇಲಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರೆ ನಡೆಯಲ್ಲ, ವಸತಿ ಶಾಲೆಗೆ ಕಳಪೆ ಮಟ್ಟದ ಆಹಾರ ಸರಬರಾಜು ಮಾಡುವ ನಿಮ್ಮ ಬೆಂಬಲರಿಗರ ವಿರುದ್ಧ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಸತಿ ಶಾಲೆಯಲ್ಲಿ ಕುಡಿಯುವ ನೀರು ಇಲ್ಲ, ವಾಟರ್ ಫಿಲ್ಟರ್ ಇದ್ದರೂ ನಾಲ್ಕೈದು ವರ್ಷಗಳಿಂದ ಶುದ್ಧ ನೀರಿಲ್ಲ, ಸ್ನಾನಕ್ಕೆ ಬಿಸಿ ನೀರಿಲ್ಲ, ಕೊಠಡಿಗಳಿಗೆ ಬಾಗಿಲು ಇಲ್ಲ, ಫ್ಯಾನ್ ಇಲ್ಲ, ಸಿಸಿ ಕ್ಯಾಮರಾ ಇಲ್ಲ, ಶೌಚಾಲಯ ವ್ಯವಸ್ಥೆ ಸರಿಯಿಲ್ಲ, ಕನ್ನಡ ಹಾಗೂ ಉರ್ದು ಶಿಕ್ಷಕರಿಲ್ಲ, ಕಲುಷಿತ ನೀರು ಹಾಗೂ ಕಲಬೆರಕೆ ಆ‌ಹಾರ ಸೇವನೆಯಿಂದ ವಿದ್ಯಾರ್ಥಿಗಳು ಪಡಬಾರದ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದರು.

ಮೆನು ಪ್ರಕಾರ ನಿತ್ಯ ಊಟ ನೀಡುವುದಿಲ್ಲ ವೆಜ್ ನಾನ್ ವೆಜ್, ಎಗ್, ತರಕಾರಿ ನೀಡುವುದಿಲ್ಲ 1 ಕೆ.ಜಿ ಬೆಳೆಯಲ್ಲಿ 300 ಮಕ್ಕಳಿಗೆ ಸಾಂಬಾರ್ ಮಾಡುತ್ತಾರೆ, 2 ಲೀ. ಹಾಲಿನಲ್ಲಿ 300 ವಿದ್ಯಾರ್ಥಿಗಳಿಗೆ ಚಹಾ ಮಾಡುತ್ತಾರೆ ಹೀಗೆ ಚಹಾ ಟಿಫಿನ್, ಬಾಳೆಹಣ್ಣು ಸೇರಿದಂತೆ ಎಲ್ಲದರಲ್ಲೂ ವಾರ್ಡನ್ ಲೂಟಿ ಮಾಡಿದ್ದಾರೆ ಇದರಲ್ಲಿ ತಾಲೂಕು ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಫುಡ್ ಪಾಯಿಸನ್ ಘಟನೆಯಿಂದ ದೂರ ಉಳಿದ ಮಕ್ಕಳು ಮರಳಿ ಶಾಲೆಗೆ ಬರಬೇಕಾದರೆ ತಕ್ಷಣ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ವಸತಿ ಶಾಲೆಯಲ್ಲಿನ ಲೋಪದೋಷಗಳನ್ನು ಹಾಗೂ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತೇಲ್ಕೂರ್ ಹೇಳಿದರು. ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ ಹೀಗಾಗಿ ವಿರೋಧ ಪಕ್ಷದವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಿರಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಿಎಂ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಬರುವ ಒಂದು ದಿನ ಮುಂಚೆ ಕಲಬುರಗಿ ಗೆ ಬಂದಿರುವುದೇ ದೊಡ್ಡ ಸಾಹಸವಾಗಿದೆ, ಸಿಎಂ ಸೇರಿದಂತೆ ಮಂತ್ರಿಮಂಡಲವೇ ಜಿಲ್ಲೆಯಲ್ಲಿತ್ತು ಬರಗಾಲ ಘೋಷಣೆ ಮಾಡಬೇಕಿತ್ತು, ಬರಗಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸರ್ಕಾರ ಬರಗಾಲ ಘೋಷಣೆ ಹಾಗೂ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮುಡ್, ಡಾ.ಅವಿನಾಶ್ ಜಾಧವ, ಬಿ.ಜಿ.ಪಾಟೀಲ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಶರಣಪ್ಪ ತಳವಾರ, ಧರ್ಮಣ್ಣ ಇಟಗಿ, ಮಲ್ಲಿಕಾರ್ಜುನ ಎಮ್ಮೆನೋರ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಆನಂದ ಪಾಟೀಲ ಆಳಂದ, ಗುಂಡು ಮತ್ತಿಮುಡ್, ವೀರಣ್ಣ ಯಾರಿ, ಸುರೇಶ್ ರಾಠೋಡ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!