ವಾಡಿ ಲಾರಿ ಮಾಲೀಕರ ಸಂಘದಲ್ಲಿ ರೂ.30 ಲಕ್ಷ ಹಣ ದುರ್ಬಳಕೆ: ಆರೋಪ
ನಾಗಾವಿ ಎಕ್ಸಪ್ರೆಸ್
ವಾಡಿ: ಒಕ್ಕೂಟ ಲಾರಿ ಮಾಲೀಕರ ಸಂಘದಲ್ಲಿ ಬಾರಿ ಪ್ರಮಾಣದ ಒಟ್ಟು 30 ಲಕ್ಷ ರೂಪಾಯಿ ಹಣದ ದುರ್ಬಳಕೆಯಾಗಿದೆ. ಹಣದ ಲೆಕ್ಕಪತ್ರ ಕೇಳಿದರೆ ಸಂಘದ ಅಧ್ಯಕ್ಷರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ರಾಜು ಕೋಳಿ ಮತ್ತು ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಸದಸ್ಯ ರಿಚರ್ಡ್ ಮರಡ್ಡಿ, ಪಟ್ಟಣದಲ್ಲಿ ಒಕ್ಕೂಟ ಲಾರಿ ಮಾಲೀಕರ ಸಂಘ ಸುಮಾರು 10 ವರ್ಷದಿಂದ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಆದರೆ ಇಲ್ಲಿಯವರೆಗೆ ಸಂಘದ ನಿಯಮಾವಳಿ ಪ್ರಕಾರ ಬ್ಯಾಂಕ್ ಖಾತೆ ತೆಗೆದಿರುವುದಿಲ್ಲ. ಆದರೆ ಸಂಘದ ಹೆಸರಿನ ಮೇಲೆ ಲಾರಿ ಮಾಲೀಕರಿಂದ ಇತರ ಮೂಲಗಳಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿ, ಸದಸ್ಯರ ಗಮನಕ್ಕೆ ತರದೇ ಸಂಘದ ಹಣವನ್ನು ಸಂಘದ ಅಧ್ಯಕ್ಷ ಶಂಕರಸಿಂಗ್ ರಾಠೋಡ, ಉಪಾಧ್ಯಕ್ಷ ಎಮ್,ಡಿ ಮಹ್ಮದ್ ಗೌಸ್, ಖಜಾಂಚಿ ಶಿವ ಮಹಾದೇವ ಚೌಕಿ ಸೇರಿ ಜಮೆಯಾದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಲಾರಿ ಮಾಲೀಕರಿಂದ ತಿಂಗಳಿಗೆ 600 ರೂಪಾಯಿ ಪಡೆಯಲಾಗುತ್ತದೆ ಮತ್ತು ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಯಾಗಬೇಕಾದರೆ 20,000 ಸಾವಿರ ರೂಪಾಯಿ ಹಣ ನೀಡಿ, ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಹೀಗೆ ಒಟ್ಟು 30 ಲಕ್ಷ ರೂಪಾಯಿ ಸಂಘದಲ್ಲಿ ಜಮೆಯಾಗಿತ್ತು. ಈ ಹಣದ ಬಗ್ಗೆ ಲೆಕ್ಕಪತ್ರ ನೀಡುವಂತೆ ಪದೇಪದೇ ಅಧ್ಯಕ್ಷರಿಗೆ ಕೇಳಿದರೂ ಯಾವುದೇ ಹಣದ ಲೆಕ್ಕಪತ್ರ ನೀಡಿಲ್ಲ. ಬದಲಾಗಿ ಸದಸ್ಯರನ್ನೇ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು:
ಒಕ್ಕೂಟ ಲಾರಿ ಮಾಲೀಕರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆಯಾಗಿದೆ. ಹಣವನ್ನು ಲಪಟಾಯಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಆದರೂ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನಮಗೆ ಜೀವ ಭಯವಾಗುತ್ತಿದೆ. ತಕ್ಷಣ ನಮಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ರಾಮು ರಾಠೋಡ, ಕಿಶನ್ ರಾಠೋಡ, ರಿಚರ್ಡ್ ಮರಡ್ಡಿ, ಸಾಧಿಕ್ ಪಟೇಲ್ ಇದ್ದರು.
“ಲಾರಿ ಮಾಲೀಕರ ಸಂಘದಲ್ಲಿ ಹಣ ದುರ್ಬಳಕೆಯಾದ ಪರಿಣಾಮ ಸಂಘವನ್ನು ವಜಾ ಮಾಡಲಾಗಿದೆ. ಇದರಿಂದ ಕೂಡಲೇ ಲಾರಿ ಮಾಲೀಕರ ಸಭೆ ಕರೆದು, ಲಾರಿ ಮಾಲೀಕರ ಸಂಘಕ್ಕೆ ಚುನಾವಣೆ ನಡೆಸಿ, ಶೀಘ್ರದಲ್ಲೇ ನಿಯಮಾವಳಿ ಪ್ರಕಾರ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ”.-ರಿಚರ್ಡ್ ಮರಡ್ಡಿ, ಹಿರಿಯ ಸದಸ್ಯ ಲಾರಿ ಮಾಲೀಕರ ಸಂಘ ವಾಡಿ.

