ದಿಗ್ಗಾಂವ ಲಿಂ.ಗುರುಲಿಂಗೇಶ್ವರರ ಪಲ್ಲಕ್ಕಿ ಉತ್ಸವ, ಜೀವನ ದರ್ಶನ ಪ್ರವಚನ ಮಹಾಮಂಗಲ, ಸತ್ಯದ ದರ್ಶನವೇ ಜೀವನ ದರ್ಶನ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜೀವನದ ಮೂಲಾಧಾರವಾದ ಸತ್ಯದ ದರ್ಶನವೇ ಜೀವನ ದರ್ಶನ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರಹಳ್ಳದ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಲಿಂ.ಗುರುಲಿಂಗೇಶ್ವರ ಶಿವಯೋಗಿಗಳ 21 ನೇ ಪುಣ್ಯಸ್ಮರಣೆ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜೀವನ ದರ್ಶನ ಪ್ರವಚನದ ಮಹಾಮಂಗಲ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೀವ-ನಿರ್ಜೀವಗಳ ಅಂತರ ಅರಿತರೆ ನಿಜವಾದ ಜೀವನ ದರ್ಶನವಾಗುತ್ತದೆ ಈ ನಿಟ್ಟಿನಲ್ಲಿ ಜನರು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಪಾಳಾ ಕಟ್ಟಿಮನಿ ಹಿರೇಮಠ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು ಮಾತನಾಡಿ, ಮನುಷ್ಯನ ಜೀವನಕ್ಕೆ ಶಿಕ್ಷಣ, ಸಂಸ್ಕಾರದ ಜತೆಗೆ ಅಧ್ಯಾತ್ಮದ ಅವಶ್ಯಕತೆ ಇದೆ, ಹೀಗಾಗಿ ಇಂದಿನ ಯಾಂತ್ರಿಕ ಹಾಗೂ ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಜೀವನ ದರ್ಶನದ ಅವಶ್ಯಕತೆ ಇದೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ವರ್ಷ ಕಳೆದಂತೆ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮ ಬೆಳವಣಿಗೆ ಕಾಣುತ್ತಿದೆ ಇದಕ್ಕೆ ಭಕ್ತರೇ ಶ್ರೀಮಠದ ಆಸ್ತಿ ಮತ್ತು ಶಕ್ತಿಯಾಗಿದ್ದಾರೆ ಎಂದು ಹೇಳಿದರು. ಇಲ್ಲಿಗೆ ನಂಬಿ ಬರುವ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಮತ್ತು ಆಶೀರ್ವಾದ ಮಾಡುವುದೆ ನಮ್ಮ ಆಶಯವಾಗಿದೆ ಎಂದರು.
ಐದು ದಿನಗಳ ಕಾಲ ಜೀವನ ದರ್ಶನ ಪ್ರವಚನ ಮಾಡಿ ಈ ಭಾಗದ ಭಕ್ತರಲ್ಲಿ ಜ್ಞಾನದ ಹಾಗೂ ಬೆಳಕಿನ ಅರಿವು ಮೂಡಿಸಿದ ಪಾಳಾ ಕಟ್ಟಿಮನಿ ಹಿರೇಮಠ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರ ಸೇವೆ ಅಮೋಘವಾಗಿದೆ ಎಂದು ಬಣ್ಣಿಸಿದರು.
ಮಳಖೇಡ ಭಂಗಿಮಠ ಶ್ರೀ ಕೊಟ್ರೇಶ್ವರ ಶಿವಾಚಾರ್ಯರು, ಹಲಕಟ್ಟಿ ಸಿದ್ದೇಶ್ವರ ಧ್ಯಾನಧಾಮ ಶ್ರೀ ರಾಜಶೇಖರ ಶಿವಾಚಾರ್ಯರು, ಮಳಖೇಡ ಕಾರ್ತಿಕೇಶ್ವರ ಮಠದ ಶ್ರೀ ಕಾರ್ತಿಕೇಶ್ವರ ಶಿವಾಚಾರ್ಯರು, ಯರಗೋಳ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ಬೆನಕನಹಳ್ಳಿ ವಿರಕ್ತಮಠದ ಶ್ರೀ ಕೇದಾರಲಿಂಗ ಮಹಾಸ್ವಾಮಿಗಳು ವೇದಿಕೆಯಲ್ಲಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರಾಮ ಪಂಚಾಯತಿ ಅಧ್ಯಕ್ಷ ಹರಳಯ್ಯ ಬಡಿಗೇರ್, ಖ್ಯಾತ ಉದ್ದಿಮೆದಾರ ನಯನ್ ಹುಬ್ಬಳ್ಳಿ, ನ್ಯಾಯವಾದಿ ಅಶ್ವಥರಾಮ್ ರಾಥೋಡ, ಹಿರಿಯ ಮುಖಂಡ ಸಿದ್ದಣಗೌಡ ಮಾಲಿ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾಬಾಳ, ಸಿದ್ದಣ್ಣ ಚಿಕ್ಕಶೇಟ್ಟಿ ದಳಪತಿ, ಶ್ರೀಮಂತ ಗುತ್ತೇದಾರ, ಚೆನ್ನವೀರ ಕಣವಿ, ನಾಗೇಂದ್ರ ಡಿಗ್ಗಿ, ನಾಗು ಮರಗೋಳ, ಮನೋಜ್ ರಾಠೋಡ, ಶರಣು ಸ್ಥಾವರಮಠ, ಮುರುಘೇಂದ್ರ ಸ್ಥಾವರಮಠ ಸೇರಿದಂತೆ ಇತರರು ಇದ್ದರು.
ಶಂಭುಲಿಂಗಪ್ಪ ಸಂಗಾವಿ ನಿರೂಪಿಸಿದರು, ತಿಪ್ಪಣ್ಣ ಸಂಗಾವಿ ಸ್ವಾಗತಿಸಿದರು, ಶರಣಯ್ಯ ಸ್ವಾಮಿ ವಂದಿಸಿದರು. ಇದಕ್ಕೂ ಮುನ್ನ ಲಿಂ.ಗುರುಲಿಂಗೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಸೇವೆ ಅದ್ದೂರಿಯಾಗಿ ನಡೆಯಿತು.

