Oplus_0

ದಿಗ್ಗಾಂವ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿ ನೇರವಾಗಿ ರೈತರಿಂದಲೇ ಭೂಮಿ ಖರೀದಿ ಮಾಡುತ್ತಿದೆ ಹೊರತು ದಲ್ಲಾಳಿಗಳ ಮೂಲಕ ಖರೀದಿ ಮಾಡುತ್ತಿಲ್ಲ: ಗುತ್ತೇದಾರ ಸ್ಪಷ್ಟನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ಹತ್ತಿರದ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯವರು ಗಣಿಗಾರಿಕೆಗಾಗಿ ರೈತರಿಂದಲೇ ನೇರವಾಗಿ ಭೂಮಿ ಖರೀದಿ ಮಾಡಿಕೊಳ್ಳುತ್ತಿದ್ದಾರೆ ಹೊರತು ದಲ್ಲಾಳಿಗಳ ಮೂಲಕ ಖರೀದಿ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಮಂತ ಗುತ್ತೇದಾರ ಸ್ಪಷ್ಟೀಕರಣ ನೀಡಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಪರಿಸರ ಕುರಿತ ಅಭಿಪ್ರಾಯಗಳು ತಿಳಿಸಿದ್ದಾರೆ ಹೀಗಾಗಿ ಕಂಪೆನಿಯವರು ನಿಯಮಾನುಸಾರ ಪ್ರತಿ ಎಕರೆಗೆ 21 ಲಕ್ಷ ನೀಡಿ ಭೂಮಿ ಖರೀದಿ ಮಾಡುತ್ತಿದ್ದಾರೆ ಎಂದು ಹೊರತು ರೈತರ ಮೇಲೆ ಯಾವುದೇ ದಬ್ಬಾಳಿಕೆ ಹಾಗೂ ಒತ್ತಾಯ ಹೇರಿಲ್ಲ ಎಂದು ಪುನರುಚ್ಚರಿಸಿದರು.

ದಲ್ಲಾಳಿಗಳ ಮೂಲಕ ರೈತರ ಭೂಮಿ ಖರೀದಿ ಮಾಡುವುದನ್ನು ನಿಲ್ಲಿಸಿ ರೈತರಿಂದಲೇ ಖರೀದಿ ಮಾಡಬೇಕು ಎಂದು ಈಚೇಗೆ ಶ್ರೀಶೈಲ್ ಪಾಟೀಲ ನೇತೃತ್ವದಲ್ಲಿ ಕೆಲವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಅವರ್ಯಾರೂ ರೈತರಲ್ಲ ಅವರು ಪ್ರತಿ ಎಕರೆಗೆ 50 ಲಕ್ಷ ಬೇಡಿಕೆ ಇಟ್ಟಿದ್ದಾರೆ ಈ ಬೆಲೆ ಪಡೆಯಬೇಕಾದರೆ ಇನ್ನೂ 20 ವರ್ಷಗಳು ಕಾಯಬೇಕಾಗುತ್ತದೆ ಎಂದು ಕುಟುಕಿದರು.

ನನ್ನ ಹೊಲ ನನ್ನ ಹಕ್ಕು ಹೀಗಾಗಿ ತಮ್ಮ ಭೂಮಿಯನ್ನು ಕಂಪೆನಿಗೆ ಮಾರಾಟ ಮಾಡಲು ಸ್ವತಂತ್ರರಾಗಿದ್ದಾರೆ ಇದನ್ನು ತಡೆಹಿಡಿಯಲು ಅವರ್ಯಾರು ಎಂದು ಪ್ರಶ್ನಿಸಿದರು.

ಕಂಪೆನಿಯವರು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿಲ್ಲ ಕಾನೂನು ಪ್ರಕಾರವೇ ಭೂಮಿ ಖರೀದಿ ಮಾಡುತ್ತಿದೆ ಹೀಗಾಗಿ ಇದಕ್ಕೆ ಅಡ್ಡಿಯಾಗದೆ ಹಾಗೂ ಉಡಾಫೆ ಮಾತನಾಡುವುದನ್ನು ಬಿಟ್ಟು ಕಂಪೆನಿಗೆ ಸಹಕರಿಸಲಿ ಎಂದು ಕಿವಿಮಾತು ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ ಮಾತನಾಡಿ, ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯವರು ಯಾರಿಗೂ ಒತ್ತಾಯ ಹಾಗೂ ದಬ್ಬಾಳಿಕೆ ಮಾಡಿಲ್ಲ, ಇಲ್ಲಿ ರವಿಕುಮಾರ್ ಅವರೇ ನೇರವಾಗಿ ರೈತರಿಂದ ದಾಖಲೆಗಳನ್ನು ಪಡೆದುಕೊಂಡು ಭೂಮಿ ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಸ್ವ ಇಚ್ಛೆಯಿಂದ ರೈತರು ತಮ್ಮ ಭೂಮಿ ಕಂಪನಿಗೆ ನೀಡುತ್ತಿದ್ದಾರೆ ಎಂದು ಹೇಳಿದರು.

ರೈತ ತುಕಾರಾಮ ಭೀಮನಳ್ಳಿಕರ್ ಮಾತನಾಡಿ, ದಲ್ಲಾಳಿಗಳ ಹಾವಳಿ ನಿಯಂತ್ರಿಸಿ ರೈತರಿಂದಲೇ ನೇರವಾಗಿ ಭೂಮಿ ಖರೀದಿ ಮಾಡಬೇಕು, ಜಮೀನು ನೋಂದಣಿ ತಡೆಹಿಡಿಯಬೇಕು ಎಂದು ರೈತರಲ್ಲದ ಕೆಲವರು ತಮಗೆ ಕಂಪೆನಿಯಿಂದ ಕಮೀಷನ್ ಸಿಕ್ಕಿಲ್ಲ ಎಂದು ಭಾವಿಸಿಕೊಂಡು ವಿನಾಕಾರಣ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ಒಂದು ವೇಳೆ ನಮ್ಮ ಜಮೀನು ನೋಂದಣಿ ತಡೆಹಿಡಿದರೆ ಅವರ ಮನೆಗಳ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯವರು ಯಾರಿಗೂ ಮೋಸ ಮಾಡಿಲ್ಲ ರಾವೂರನಲ್ಲಿ ಪ್ರತಿ ಎಕರೆಗೆ 21 ಲಕ್ಷ ನೀಡಿದಂತೆ ದಿಗ್ಗಾಂವ ರೈತರಿಗೂ ಪ್ರತಿ ಎಕರೆಗೆ 21 ಲಕ್ಷ ನೀಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಿಗ್ಗಾಂವ ಗ್ರಾಮದ ರೈತರಾದ ರಾಜು ಪುಟಪಾಕ್, ಮಲ್ಲಿಕಾರ್ಜುನ ಬಂದಳ್ಳಿ, ಚಂದ್ರು ಹಲಗಿ, ನಾಗರಾಜ್ ಜೂಟಿ, ಚಂದ್ರು ಇಟಗಿ, ಜಗದೇವ ಕಲಕೇರಿ, ಚಂದ್ರು ಮನಳ್ಳಿ, ಕಲ್ಲಪ್ಪ ಹಲಗಿ, ಸೋಮು ಹೊಸಮನಿ, ಚನ್ನಪ್ಪ ಭೀಮನಳ್ಳಿ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!