ಡೋಣಗಾಂವ ಮಹಿಳಾ ಸಾಮೂಹಿಕ ಶೌಚಾಲಯ ನೆನೆಗುದಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಕಾಶಪ್ಪ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮಂಜೂರು ಆದ ಮಹಿಳಾ ಸಾಮೂಹಿಕ ಶೌಚಾಲಯ ಕಾಮಗಾರಿ ನೆನೆಗುದಿಯಲ್ಲಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಕಾಶಪ್ಪ ಡೋಣಗಾಂವ ಎಂದು ಆರೋಪಿಸಿದ್ದಾರೆ.
ಗ್ರಾಮದ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕ್ಷೇತ್ರದ ಶಾಸಕರು ಸಚಿವರು ಪ್ರಿಯಾಂಕ್ ಖರ್ಗೆ ಅವರು ಮಹಿಳಾ ಸಾಮೂಹಿಕ ಶೌಚಾಲಯ ಮಂಜೂರು ಮಾಡಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 25 ಲಕ್ಷ ಅನುದಾನ ಸಹ ಬಿಡುಗಡೆ ಮಾಡಿಸಿದ್ದಾರೆ ಇಷ್ಟಾದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ ಆರು ತಿಂಗಳಿಂದ ನೆನೆಗುದಿಯಲ್ಲಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಶೌಚಾಲಯ ಗ್ರಾಮದ ಸಮೀಪ ನಿರ್ಮಾಣ ಮಾಡದೇ ಗ್ರಾಮದಿಂದ ದೂರದ 1ಕಿ.ಮೀ ಅಂತರದ ಹೊಲದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಇದು ಅವೈಜ್ಞಾನಿಕ ಕಾಮಗಾರಿ ಆಗಿದೆ, ಇದು ಮಹಿಳೆಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಆಗುತ್ತದೆ ಗ್ರಾಮದಿಂದ ಶೌಚಾಲಯಕ್ಕೆ ಹೋಗಲು ರಸ್ತೆಯ ಕೊರತೆ ಇದೆ ಮೊದಲು ರಸ್ತೆ ನಿರ್ಮಾಣ ಮಾಡಿದ ನಂತರವೇ ಶೌಚಾಲಯ ಪೂರ್ಣಗೊಳಿಸುವ ಕಡೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ನಿರ್ಮಾಣವಾದ ಅಪೂರ್ಣ ಶೌಚಾಲಯ ಕಟ್ಟಡದ ಒಳಗಡೆ ಇಟ್ಟಂಗಿಗಳಿಗೊಸ್ಕರ ಕೀಡಿಗೇಡಿಗಳು ಗೋಡೆಗಳು ಒಡೆದಿದ್ದಾರೆ ಇದನ್ನು ಕೂಡಲೇ ದುರಸ್ತಿ ಮಾಡಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಟ್ಟಡ ಅವಸಾನದ ಅಂಚಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ವಿಚಾರಿಸಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಂಬಂಧಿಕರು ಅಡ್ಡಿಪಡಿಸುತ್ತಿದ್ದರಿಂದ ಈ ಕಾಮಗಾರಿ ನೆನೆಗುದಿಯಲ್ಲಿದೆ, ವಾರದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಏನೇ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಿ ಕಾಮಗಾರಿ ನಡೆಯುವ ಹಾಗೆ ಮಾಡುತ್ತೇನೆ ಎಂದಿದ್ದಾರೆ ಎಂದು ಕಾಶಪ್ಪ ಡೋಣಗಾಂವ ತಿಳಿಸಿದ್ದಾರೆ.